ಜೈಪುರ:ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿನಿ ತನ್ನ ಹಾಸ್ಟೆಲ್ ಕೊಠಡಿಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ನಿವಾಸಿ ನಿಶಾ ಅಹಿರ್ (22) ಬುಧವಾರ ರಾತ್ರಿ ಮಹಾವೀರ್ ನಗರದಲ್ಲಿನ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಕೊಠಡಿಯಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರು ಇಲ್ಲಿಗೆ ಆಗಮಿಸಿದ್ದರು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಜವಾದ ಕಾರಣ ತಿಳಿಯಲಿದೆ ಎಂದು ಜವಾಹರ್ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಕುಂದನ್ ಕುಮಾರ್ ಮಾಹಿತಿ ನೀಡಿದರು.
ಹೆಡ್ ಕಾನ್ಸ್ಟೆಬಲ್ ರಂಜಿತ್ ಸಿಂಗ್ ಮಾತನಾಡಿ, "ವಿದ್ಯಾರ್ಥಿನಿ ಬಹಳ ಸಮಯದಿಂದ ಅಧ್ಯಯನ ಮಾಡಲು ತಡರಾತ್ರಿ ಎಚ್ಚರವಾಗಿರುತ್ತಿದ್ದರು. ಆದರೆ, ಗುರುವಾರ ರಾತ್ರಿ ಆಕೆ ತನ್ನ ಕುಟುಂಬ ಸದಸ್ಯರಿಂದ ಬಂದ ಕರೆಗಳನ್ನು ಸ್ವೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಹಾಸ್ಟೆಲ್ ನಿರ್ವಾಹಕರಿಗೆ ಕರೆ ಮಾಡಿದ್ದಾರೆ. ಇದಾದ ನಂತರ ಹಾಸ್ಟೆಲ್ ನಿರ್ವಾಹಕರು ಬಾಗಿಲು ಬಡಿದರೂ ಡೋರ್ ಓಪನ್ ಆಗಿಲ್ಲ. ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂ ಬುಧವಾರ ರಾತ್ರಿ 1:45ಕ್ಕೆ ಜವಾಹರ್ ನಗರ ಠಾಣೆಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿ, ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಪೊಲೀಸರು ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ" ಎಂದರು.
ಇದನ್ನೂ ಓದಿ:ಕೋಟಾದಿಂದ ಮತ್ತೆ ಸುಸೈಡ್ ಸುದ್ದಿ: ನೀಟ್ ಆಕಾಂಕ್ಷಿ ಆತ್ಮಹತ್ಯೆ