ನವದೆಹಲಿ:ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET) ಸೆಪ್ಟೆಂಬರ್ 12ರಂದು ನಡೆಸಲು ನಿರ್ಧರಿಸಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ದೇಶದಲ್ಲಿ ಪ್ರಥಮ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವರು ಟ್ವಿಟ್ ಮಾಡಿ ಮಾಹಿತಿ ಶೇರ್ ಮಾಡಿದ್ದಾರೆ. ಕನ್ನಡ, ಪಂಜಾಬ್, ಮಲಯಾಳಂ, ಹಿಂದಿ, ಬೆಂಗಾಳಿ, ಒಡಿಯಾ, ಗುಜರಾತಿ, ಮರಾಠಿ, ತೆಲಗು ಸೇರಿದಂತೆ ಇಂಗ್ಲೀಷ್ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ವಿಶೇಷವೆಂದರೆ ಕುವೈತ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪರೀಕ್ಷಾ ಕೇಂದ್ರ ತೆರೆಯಲಾಗುವುದು ಎಂದಿರುವ ಸಚಿವರು, ಅಲ್ಲಿಂದಲೇ ಪರೀಕ್ಷೆ ಬರೆಯಬಹುದು ಎಂದಿದ್ದಾರೆ. ಜುಲೈ 13ರ ಸಂಜೆ 5 ಗಂಟೆಯಿಂದ ಅರ್ಜಿ ಪ್ರಕ್ರಿಯೆ ಆರಂಭಗೊಂಡಿದ್ದು, ಎನ್ಟಿಎ ವೆಬ್ಸೈಟ್ ಮೂಲಕ ಅರ್ಜಿ ಪಡೆದುಕೊಳ್ಳಬಹುದಾಗಿದೆ.