ನವದೆಹಲಿ:1988ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 34 ವರ್ಷಗಳ ನಂತರ ಮಾಜಿ ಕ್ರಿಕೆಟಿಗ - ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಪಟಿಯಾಲಾ ಕೋರ್ಟ್ಗೆ ಬಂದು ಅವರು ಶರಣಾಗತರಾಗಿದ್ದಾರೆ. ಪ್ರಕರಣದಲ್ಲಿ ತಮಗೆ ವಿಧಿಸಲಾದ ಶಿಕ್ಷೆಗೆ ಒಳಪಡಲು ಕೆಲವು ವಾರಗಳ ಕಾಲಾವಕಾಶ ಕೋರಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇಂದು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು.
ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಶರಣಾಗಲು ತಮಗೆ ಕೆಲ ವಾರಗಳ ಕಾಲಾವಕಾಶ ಕೋರಿದ್ದ ಅವರು, ಪಟಿಯಾಲಾ ಕೋರ್ಟ್ಗೆ ಬಂದು ಶರಣಾಗಿದ್ದಾರೆ.
ಇದನ್ನೂ ಓದಿ:ಗುಜರಾತ್, ಹಿಮಾಚಲದಲ್ಲಿ 'ಕೈ' ಸೋಲು ಖಚಿತ.. 'ಚಿಂತನಾ ಶಿಬಿರ'ದ ಬಗ್ಗೆ ಪ್ರಶಾಂತ್ ಕಿಶೋರ್ ಟೀಕೆ
ಮುಖ್ಯ ಮ್ಯಾಜಿಸ್ಟ್ರೇಟ್ ಮುಂದೆ ಅವರು ಶರಣಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ, ಅವರನ್ನ ಪೊಲೀಸರ ವಶಕ್ಕೆ ನೀಡುವ ಸಾಧ್ಯತೆ ಇದೆ. ಕಳೆದ ಕೆಲ ವಾರಗಳ ಹಿಂದೆ ಪಂಜಾಬ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ಇದರ ಬೆನ್ನಲ್ಲೇ ಅವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
1988ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷಗಳ ನಂತರ ಮಾಜಿ ಕ್ರಿಕೆಟಿಗ - ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂಕೋರ್ಟ್ ಗುರುವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಎಸ್ಕೆ.ಕೌಲ್ ಅವರಿದ್ದ ಪೀಠ, ರಸ್ತೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಿಧು ಅವರನ್ನು ಆರೋಪಮುಕ್ತಗೊಳಿಸಿದ್ದ ಮೇ 2018ರ ಆದೇಶವನ್ನು ಮರುಪರಿಶೀಲಿಸಿ ತೀರ್ಪು ನೀಡಿದೆ.
ಈ ಹಿಂದೆ ಸಿಧುಗೆ ಸಾವಿರ ರೂಪಾಯಿ ದಂಡ ವಿಧಿಸಿ ಆರೋಪಮುಕ್ತಗೊಳಿಸಲಾಗಿತ್ತು. ಆದರೆ, 65 ವರ್ಷದ ಸಂತ್ರಸ್ತೆಯ ಕುಟುಂಬ ಇದನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಐಪಿಸಿ ಸೆಕ್ಷನ್ 323ರ ಅಡಿ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.