ಹೈದರಾಬಾದ್:ಪ್ರಕೃತಿ ಮಾನವನ ಉಳಿವಿಗೆ ಮೂಲಾಧಾರ. ಇಂತಹ ಅಗತ್ಯದ ಮೇಲೆ ನಾವೇ ದಾಳಿ ಮಾಡುತ್ತಿದ್ದೇವೆ. ವಾಯು, ಶಬ್ದ ಮತ್ತು ಜಲ ಮಾಲಿನ್ಯವು ಜಗತ್ತಿಗೆ ಬಹಳ ಆತಂಕಕಾರಿ ವಿಷಯವಾಗಿದೆ. ಇದು ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಕೃತಿ ಕೊಟ್ಟ ಭವ್ಯ ಶ್ರೀಮಂತಿಕೆಯನ್ನು ಮಾನವರಾದ ನಾವೇ ಹಾಳು ಮಾಡುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ನಾವೇ ಬಲಿಯಾಗೋದು ಮಾತ್ರ ಶತಃಸಿದ್ಧ.
ಪ್ರತಿ ವರ್ಷದಂತೆ ಡಿಸೆಂಬರ್ 2 ನೇ ತಾರೀಖನ್ನು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತದೆ. ಮಾಲಿನ್ಯವನ್ನು ತೊಡೆದುಹಾಕಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಪ್ರಕೃತಿ ಮಾತೆಯನ್ನು ರಕ್ಷಿಸಬೇಕಾಗಿದೆ. 2022 ರ ಸಾಲಿನ ಘೋಷವಾಕ್ಯ ಮತ್ತು ಥೀಮ್ ಇನ್ನೂ ಘೋಷಿಸಲಾಗಿಲ್ಲವಾದರೂ, ಭವಿಷ್ಯದ ಪೀಳಿಗೆಗೆಗಾಗಿ ಭೂಮಿಯನ್ನು ಉಳಿಸುವ ಪಣ ತೊಡಬೇಕಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವ್ಯಾಪಕವಾದ ವಾಯು ಮಾಲಿನ್ಯದ ಪರಿಣಾಮಗಳಿಂದಾಗಿ ಪ್ರತಿ ವರ್ಷ ಸುಮಾರು 7 ಮಿಲಿಯನ್ ಜನರು ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಇದು ನಾವೇ ಸೃಷ್ಟಿಸಿದ ಕೂಪಕ್ಕೆ ನಾವೇ ಬೀಳುತ್ತಿರುವ ಪರಿಯಾಗಿದೆ ಎಂಬುದು ಗೋಚರಿಸುತ್ತದೆ. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಆಚರಣೆಯು ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಮಾಲಿನ್ಯ ನಿಯಂತ್ರಣ ನೀತಿಗಳನ್ನು ಬದಲಾಯಿಸಲು ಸರ್ಕಾರವನ್ನು ಎಚ್ಚರಿಸಬೇಕಾಗಿದೆ.