ಕರ್ನಾಟಕ

karnataka

By

Published : Dec 6, 2021, 1:59 PM IST

ETV Bharat / bharat

ನಾಗಾಲ್ಯಾಂಡ್‌ ನಾಗರಿಕರ ಹತ್ಯೆ: ಮೃತರ ಕುಟುಂಬಕ್ಕೆ ತಲಾ 16 ಲಕ್ಷ ರೂ. ಪರಿಹಾರ.. ಅಂತ್ಯಕ್ರಿಯೆಯಲ್ಲಿ ಸಿಎಂ ರಿಯೊ ಭಾಗಿ

ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಬಲಿಯಾದವರ ಅಂತ್ಯಕ್ರಿಯೆಯಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಭಾಗಿಯಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಸೇರಿ ಮೃತರ ಪ್ರತಿ ಕುಟುಂಬಗಳಿಗೆ ಒಟ್ಟು 16 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ..

civilians deaths in Nagaland
ನಾಗಾಲ್ಯಾಂಡ್‌ ನಾಗರಿಕರ ಹತ್ಯೆ

ಮೋನ್ (ನಾಗಾಲ್ಯಾಂಡ್‌): ನಾಗಾಲ್ಯಾಂಡ್​ನಲ್ಲಿ ಕೊಲ್ಲಲ್ಪಟ್ಟ ನಾಗರಿಕರ ಪ್ರತಿ ಕುಟುಂಬಗಳಿಗೆ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ಕೂಡ ಮೃತರ ಕುಟುಂಬಗಳಿಗೆ 11 ಲಕ್ಷ ರೂ. ನೀಡುವುದಾಗಿ ತಿಳಿಸಿದೆ.

ಅಂತ್ಯಕ್ರಿಯೆಯಲ್ಲಿ ಸಿಎಂ ರಿಯೊ ಭಾಗಿ

ರಾಜ್ಯ ಸರ್ಕಾರದಿಂದ ಘೋಷಿಸಲಾದ ಹಣವನ್ನು ನಾಗಾಲ್ಯಾಂಡ್ ಸಾರಿಗೆ ಸಚಿವ ಪೈವಾಂಗ್ ಕೊನ್ಯಾಕ್ ಅವರು ಗ್ರಾಮದ ಅಧ್ಯಕ್ಷರಿಗೆ ನಿನ್ನೆ ರಾತ್ರಿಯೇ ಹಸ್ತಾಂತರಿಸಿದ್ದಾರೆ. ಇಂದು ಸೋಮ ಪಟ್ಟಣದಲ್ಲಿ ಮೃತರ ಅಂತ್ಯಕ್ರಿಯೆ ನಡೆಯುತ್ತಿದೆ. ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ಉಪಮುಖ್ಯಮಂತ್ರಿ ವೈ ಪ್ಯಾಟನ್ ಮತ್ತು ಇತರ ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ರಿಯೊ, ನಾನು ಕೇಂದ್ರ ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ, ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದೇವೆ.

ಕೇಂದ್ರ ಸರ್ಕಾರ ಪ್ರತಿ ಕುಟುಂಬಕ್ಕೆ ತಲಾ 11 ಲಕ್ಷ ರೂ. ಪರಿಹಾರ ನೀಡಿದೆ. ನಾಗಾಲ್ಯಾಂಡ್‌ನಿಂದ AFSPA ತೆಗೆದುಹಾಕುವಂತೆ ನಾವು ಕೇಂದ್ರ ಸರ್ಕಾರವನ್ನು ಕೇಳುತ್ತಿದ್ದೇವೆ. ಈ ಕಾನೂನು ನಮ್ಮ ದೇಶದ ಚಿತ್ರಣವನ್ನು ಮಬ್ಬುಗೊಳಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ನಾಗಾಲ್ಯಾಂಡ್‌ ನಾಗರಿಕರ ಹತ್ಯೆ; ಗೃಹ ಸಚಿವರ ಹೇಳಿಕೆಗೆ ವಿಪಕ್ಷಗಳ ಪಟ್ಟು

15 ಮಂದಿಯ ಹತ್ಯೆ

ಭಾರತ-ಮ್ಯಾನ್ಮಾರ್ ಗಡಿ ಭಾಗವಾದ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಶನಿವಾರ ಸಂಜೆ ಬಂಡುಕೋರರೆಂದು ತಪ್ಪಾಗಿ ಭಾವಿಸಿ ನಾಗಾಲ್ಯಾಂಡ್‌ನಲ್ಲಿನ 14 ಮಂದಿ ನಾಗರಿಕರನ್ನು ಸೇನೆ ಗುಂಡಿಕ್ಕಿ ಹತ್ಯೆ ಮಾಡಿತ್ತು. ಈ ವೇಳೆ ಓರ್ವ ಯೋಧ ಕೂಡ ಹುತಾತ್ಮರಾಗಿದ್ದು, ಒಟ್ಟು 15 ಮಂದಿ ಮೃತಪಟ್ಟಿದ್ದರು. ಕೆಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಭದ್ರತಾ ಪಡೆಗಳ ವಿರುದ್ಧ ಎಫ್‌ಐಆರ್‌

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಘಟನೆಯ ತನಿಖೆಗಾಗಿ ಈಗಾಗಲೇ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಭದ್ರತಾ ಪಡೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ನಾಗಾಲ್ಯಾಂಡ್‌ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಸದನದಲ್ಲಿ ಪ್ರತಿಧ್ವನಿಸಿದ ವಿಚಾರ

ಈ ವಿಚಾರ ಇಂದು ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಘಟನೆಯನ್ನು ಖಂಡಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದವು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಸಂಬಂಧ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಒತ್ತಾಯಿಸಿದರು. ಲೋಕಸಭೆಯಲ್ಲಿ ನಾಗಾಲ್ಯಾಂಡ್‌ನ ಎನ್‌ಡಿಪಿಪಿ ಸಂಸದ ಟಿ. ಯೆಪ್ತೋಮಿ ಅವರು ಕೇಂದ್ರದಿಂದ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದರು.

ABOUT THE AUTHOR

...view details