ಮುಂಬೈ:ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಂತರ ಮಂಕಾಗಿದ್ದ ಮುಂಬೈ ಷೇರುಪೇಟೆಯಲ್ಲಿ ಮತ್ತೆ ಚೇತರಿಕೆ ಕಂಡುಬರುತ್ತಿದೆ. ಬುಧವಾರ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಒಂದು ಸಾವಿರಕ್ಕೂ ಅಧಿಕ ಅಂಕಗಳ ಜಿಗಿತವಾಗಿ ಮತ್ತೆ 56 ಸಾವಿರ ಅಂಕಗಳ ಗಡಿದಾಟಿತು. ಅದೇ ರೀತಿಯಾಗಿ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಕೂಡ ಲಯಕ್ಕೆ ಮರಳಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಪರಿಣಾಮ ದೇಶಿ ಮಾರುಕಟ್ಟೆ ಮೇಲೂ ಬೀರಿತ್ತು. ಇದೀಗ ಸುಮಾರು 20 ದಿನಗಳ ಬಳಿಕ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಕಡಿಮೆಯಾಗುತ್ತಿದೆ. ಆದ್ದರಿಂದ ಐಟಿ, ಬ್ಯಾಂಕಿಂಗ್ ಹಾಗೂ ಆರ್ಥಿಕ ವಲಯದ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ಬುಧವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿಯೂ ಗೂಳಿ ಓಟ ಮುಂದುವರೆಯಿತು.
ದಿನದಂತ್ಯಕ್ಕೆ ಸೆನ್ಸೆಕ್ಸ್ 1,039.80 ಅಂಕಗಳು ಅಥವಾ ಶೇ.1.86ರಷ್ಟು ಜಿಗಿತಗೊಂಡು 56,816.65 ಅಂಕಗಳಿಗೆ ಮುಕ್ತಾಯವಾಗಿದೆ. ಅದೇ ರೀತಿಯಾಗಿ ನಿಫ್ಟಿ ಸಹ 312.35 ಅಂಕಗಳು ಅಥವಾ ಶೇ.1.87ರಷ್ಟು ಏರಿಕೆಯಾಗಿ 16,975.35 ಅಂಕಗಳಿಗೆ ತಲುಪಿ ವಹಿವಾಟು ಮುಗಿಸಿತು.
ಯಾರಿಗೆ ಲಾಭ-ನಷ್ಟ? ಬುಧವಾರ ಅಲ್ಟ್ರಾಟೆಕ್ ಸಿಮೆಂಟ್ ಅತಿ ಹೆಚ್ಚಿನ ಲಾಭಗಳಿಸಿದ್ದು, ತನ್ನ ಷೇರು ಮೌಲ್ಯವನ್ನು ಶೇ.5ರಷ್ಟು ಏರಿಸಿಕೊಂಡಿದೆ. ನಂತರದಲ್ಲಿ ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಚ್ಡಿಎಫ್ಸಿ, ಬಜಾಜ್ ಫಿನ್ಸರ್ವ್, ಇನ್ಫೋಸಿಸ್, ಬಜಾಜ್ ಫೈನಾನ್ಸ್ ಸ್ಥಾನ ಪಡೆದಿದೆ. ಇತ್ತ, ಸನ್ ಫಾರ್ಮಾ ಮತ್ತು ಪವರ್ ಗ್ರೀಡ್ ನಷ್ಟ ಅನುಭವಿಸಿದೆ.
ಇದನ್ನೂ ಓದಿ:59 ನಿಮಿಷದಲ್ಲಿ ಸಾಲ.. 3 ವರ್ಷದಲ್ಲಿ 40 ಸಾವಿರ ಕೋಟಿ ವಿತರಣೆ: ಯಾರಿಗೆ ಸಿಕ್ಕಿದೆ ಈ ಲಾಭ?