ಮುಂಬೈ: ಮುಂಬೈ ಮಹಾನಗರ ಮತ್ತು ಇಡೀ ಮಹಾರಾಷ್ಟ್ರವು ಕಳೆದ ಒಂದೂ ಕಾಲು ವರ್ಷದಿಂದ ಕೊರೊನಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಮಧ್ಯೆ ಕೊರೊನಾ ಬಿಕ್ಕಟ್ಟಿನ ಜೊತೆಗೆ ಮ್ಯುಕೊಮೈಕೊಸಿಸ್ ಎಂಬ ಮತ್ತೊಂದು ಆರೋಗ್ಯದ ಸಮಸ್ಯೆ ಈಗ ಎದುರಾಗಿದೆ. ಕೊರೊನಾ ಮತ್ತು ಇತರ ದೀರ್ಘಕಾಲೀನ ರೋಗಗಳಿಂದ ಚೇತರಿಸಿಕೊಂಡ ರೋಗಿಗಳು ಹೆಚ್ಚಾಗಿ ಈ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಪ್ರಸ್ತುತ ಮ್ಯುಕೊಮೈಕೊಸಿಸ್ ಪೀಡಿತ 26 ರೋಗಿಗಳನ್ನು ಮುಂಬೈ ಮಹಾನಗರ ಪಾಲಿಕೆಯ ಕೆಇಎಂ ಆಸ್ಪತ್ರೆಗೆ ಹಾಗೂ 25 ರೋಗಿಗಳನ್ನು ಪರೇಲ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಎರಡೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಒಟ್ಟು ರೋಗಿಗಳ ಪೈಕಿ ಏಳು ಜನ ಕಣ್ಣು ಕಳೆದುಕೊಂಡಿದ್ದಾರೆ. ಈ ತೀವ್ರ ಆರೋಗ್ಯ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಮತ್ತು ಕೋವಿಡ್ ಕಾರ್ಯಪಡೆ ಈ ರೋಗವನ್ನು ತಕ್ಷಣ ನಿಯಂತ್ರಣಕ್ಕೆ ತರಲು ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಗ್ಲೋಬಲ್ ಆಸ್ಪತ್ರೆಯ ಮೂಗು-ಕಿವಿ-ಗಂಟಲು ತಜ್ಞ ಡಾ. ಮಿಲಿಂದ್ ನವಲಖೆ ಈಟಿವಿ ಭಾರತ್‌ಗೆ ಮಾಹಿತಿ ನೀಡಿದರು.