ನವದೆಹಲಿ: ಪಂಚರಾಜ್ಯ ಚುನಾವಣೆ ಘೋಷಣೆಯಾದಾಗಿನಿಂದಲೂ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡು ಬಂದಿರಲಿಲ್ಲ. ಆದರೆ, ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದಂತೆ ತೈಲ ಬೆಲೆ, ಅಡುಗೆ ಅನಿಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ವಿಚಾರವಾಗಿ ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿ, ಸಭಾತ್ಯಾಗ ನಡೆಸಿದವು.
ಲೋಕಸಭೆಯಲ್ಲಿ ಮಾತನಾಡಿರುವ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ, ಚುನಾವಣೆಗಳು ಘೋಷಣೆಯಾದಾಗ ಮಾತ್ರ ಬೆಲೆಗಳು ನಿಯಂತ್ರಣದಲ್ಲಿರುತ್ತವೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಏರಿಕೆಯಾಗದಂತೆ ಪ್ರತಿ ತಿಂಗಳಿಗೊಮ್ಮೆ ಚುನಾವಣೆ ನಡೆಯಲಿ ಎಂದು ವ್ಯಂಗ್ಯವಾಡಿದರು. ಶೂನ್ಯ ವೇಳೆಯಲ್ಲಿ ಮಾತನಾಡಿರುವ ಸಂಸದೆ, ಪ್ರತಿ ತಿಂಗಳು ಚುನಾವಣೆ ನಡೆದರೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ತಪ್ಪಲಿದೆ. ಜೊತೆಗೆ ಎಲ್ಲರೂ ನೆಮ್ಮದಿಯಿಂದ ಇರಬಹುದು ಎಂದರು.