ಇಂದೋರ್ (ಮಧ್ಯ ಪ್ರದೇಶ): ಕರ್ನಾಟಕ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎರಡು ದಿನಗಳ ಕಾಲ ಮಧ್ಯಪ್ರದೇಶದ ಪ್ರವಾಸ ಕೈಗೊಂಡಿದ್ದು, ಇಂದು ಇಂದೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಂತರ ಅಲ್ಲಿಂದ ದಾತಿಯಾ ಜಿಲ್ಲೆಯ ಪ್ರಸಿದ್ಧ ಪೀತಾಂಬರ ಪೀಠಕ್ಕೆ ಭೇಟಿ ನೀಡಿ ಡಿಕೆಶಿ ಪ್ರಾರ್ಥನೆ ಸಲ್ಲಿಸಿದರು.
ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಡಿಕೆ ಶಿವಕುಮಾರ್ ಗ್ವಾಲಿಯರ್‌ಗೆ ತೆರಳಿದರು. ನಾಳೆ (ಭಾನುವಾರ) ಶಿವಕುಮಾರ್ ಉಜ್ಜಯಿನಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಸ್ಮ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಕಾಲಭೈರವ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಲಿದ್ದಾರೆ.
ಇದಕ್ಕೂ ಮುನ್ನ ಇಂದೋರ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡುವ ಬದಲು ಕರ್ನಾಟಕದ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ ಎಂದು ಹೇಳಿದರು. ಬಜರಂಗ ದಳ ನಿಷೇಧಿಸುವ ಮತ್ತು ಹೆಡ್ಗೇವಾರ್ ಪಠ್ಯ ತೆಗೆದುಹಾಕುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಕರ್ನಾಟಕ ಶಾಂತಿಯ ತೋಟವಾಗಿದೆ. ಇಲ್ಲಿ ಶಾಂತಿ ಕದಡಲು ಪ್ರಯತ್ನಿಸುವ ಯಾವುದೇ ಸಂಘಟನೆಯನ್ನು ಬಿಡುವುದಿಲ್ಲ ಎಂದರು.