ಕರ್ನಾಟಕ

karnataka

ETV Bharat / bharat

ಚಂಬಲ್​ ನದಿ ದಾಟುತ್ತಿದ್ದಾಗ ಕೊಚ್ಚಿಹೋದ ಭಕ್ತರು.. ಮೂವರ ಸಾವು - ನದಿಯಲ್ಲಿ ಕೊಚ್ಚಿಹೋದ ಭಕ್ತರ ಗುಂಪು

ಮಧ್ಯಪ್ರದೇಶದಲ್ಲಿ ಭಕ್ತರ ಗುಂಪೊಂದು ಚಂಬಲ್​ ನದಿ ದಾಟುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇದರಲ್ಲಿ ಮೂವರು ಸಾವನ್ನಪ್ಪಿದ್ದು, 8 ಮಂದಿಯನ್ನು ರಕ್ಷಿಸಲಾಗಿದೆ. ಇನ್ನುಳಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಧ್ಯಪ್ರದೇಶದ ಚಂಬಲ್​ ನದಿಗೆ ಬಿದ್ದ ಭಕ್ತರ ವಾಹನ
ಮಧ್ಯಪ್ರದೇಶದ ಚಂಬಲ್​ ನದಿಗೆ ಬಿದ್ದ ಭಕ್ತರ ವಾಹನ

By

Published : Mar 18, 2023, 12:39 PM IST

Updated : Mar 18, 2023, 1:36 PM IST

ಮೊರೆನಾ/ಕರೌಲಿ:ಉತ್ತರ ಭಾರತದ ಪ್ರಸಿದ್ಧ ಕೈಲಾದೇವಿ ಜಾತ್ರೆ ಆರಂಭಕ್ಕೂ ಮುನ್ನವೇ ಆಘಾತಕಾರಿ ಘಟನೆ ನಡೆದಿದೆ. ಶನಿವಾರ ಮಧ್ಯಪ್ರದೇಶದಿಂದ ಕಾಲ್ನಡಿಗೆಯಲ್ಲಿ ಕೈಲಾದೇವಿ ಸನ್ನಿಧಾನಕ್ಕೆ ಬರುತ್ತಿದ್ದ ಪಾದಯಾತ್ರಿಗಳ ಗುಂಪೊಂದು ಚಂಬಲ್​ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ದುರಂತದಲ್ಲಿ ಮೂವರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 8 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸಿಲೈಚೌನ್ ಗ್ರಾಮದ ನಿವಾಸಿಗಳಾದ ಕುಶ್ವಾಹ ಸಮುದಾಯಕ್ಕೆ ಸೇರಿದ 17 ಜನರಿದ್ದ ಪಾದಯಾತ್ರಿಕರ ಗುಂಪು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಗಡಿಯಲ್ಲಿ ಸಾಗಿ ಬರುತ್ತಿತ್ತು. ಮಂಡ್ರಾಯಲ್‌ ಪ್ರದೇಶದಲ್ಲಿ ಚಂಬಲ್ ನದಿಯನ್ನು ದಾಟಬೇಕಿತ್ತು. ಕರೌಲಿ ಜಿಲ್ಲೆಯ ಉಪವಿಭಾಗ ಚಂಬಲ್‌ನ ರೋಧೈ ಘಾಟ್‌ನಲ್ಲಿ ಪಾದಯಾತ್ರಿಕರ ಗುಂಪು ನದಿ ನೀರನ್ನು ದಾಟುತ್ತಿತ್ತು. ಈ ವೇಳೆ ನೀರಿನ ರಭಸಕ್ಕೆ ಭಕ್ತರು ಕೊಚ್ಚಿ ಹೋದರು ಎಂದು ತಿಳಿಸಿದರು.

ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಭಕ್ತರು ಕಿರುಚಾಡಿದ್ದು, ಇದನ್ನು ಕಂಡವರು ನದಿಗೆ ಧುಮುಕಿದ್ದಾರೆ. ಗ್ರಾಮಸ್ಥರೇ 8 ಜನರನ್ನು ರಕ್ಷಣೆ ಮಾಡಿ ದಡ ಸೇರಿಸಿದ್ದಾರೆ. ಆದರೆ, ಕೆಲವು ಭಕ್ತರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಇದೇ ವೇಳೆ ಮೂವರು ಪಾದಯಾತ್ರಿಗಳು ಸಾವನ್ನಪ್ಪಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಮಾಹಿತಿ ಪಡೆದ ನಂತರ ಕರೌಲಿ ಕಲೆಕ್ಟರ್ ಅಂಕಿತ್ ಕುಮಾರ್ ಸಿಂಗ್, ಎಸ್​ಪಿ ನಾರಾಯಣ್ ಟೊಂಕಾಸ್ ಜೊತೆಗೆ ಪೊಲೀಸ್ ಆಡಳಿತ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೈಲಾದೇವಿಯಲ್ಲಿ ಲಕ್ಕಿ ಮೇಳಕ್ಕೆ ಬರುತ್ತಿದ್ದಾಗ ಅವಘಡ:ಪ್ರತಿ ವರ್ಷ ಚೈತ್ರ ನವರಾತ್ರಿಗೂ ಮುನ್ನ ಕರೌಲಿಯ ಪ್ರಸಿದ್ಧ ದೇವಾಲಯವಾದ ಕೈಲಾದೇವಿಯಲ್ಲಿ ಲಕ್ಕಿಮೇಳ ನಡೆಯುತ್ತದೆ. ಇದರಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಇವರಲ್ಲಿ ಪಾದಯಾತ್ರಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಮಾರ್ಚ್ 19 ರಂದು(ನಾಳೆ) ಮೇಳ ಆರಂಭವಾಗಲಿದೆ. ಇದರಲ್ಲಿ ಭಾಗವಹಿಸಲು ಯಾತ್ರಿಕರು ಬರುತ್ತಿದ್ದಾಗ ದುರಂತ ಸಂಭವಿಸಿದೆ.

ಬಸ್​ ಪಲ್ಟಿಯಾಗಿ ಕಾರ್ಮಿಕರ ಸಾವು:ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದ ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಸ್​ವೊಂದು ದಿಢೀರ್​ ಪಲ್ಟಿಯಾಗಿ ನಾಲ್ವರು ಸ್ಥಳೀಯೇತರ ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ಈ ವೇಳೆ 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಅವಂತಿಪೋರಾದ ಗೋರಿಪೋರಾ ಪ್ರದೇಶದಲ್ಲಿ ಬಸ್ ಪಲ್ಟಿಯಾಗಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಸುನೀಗಿದ್ದಾರೆ. ಘಟನೆಯಲ್ಲಿ ಅನೇಕ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ​ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓದಿ:ಅವಂತಿಪೋರಾದಲ್ಲಿ ಬಸ್​ ಪಲ್ಟಿ: ನಾಲ್ವರ ದುರ್ಮರಣ, 24 ಕ್ಕೂ ಅಧಿಕ ಮಂದಿಗೆ ಗಾಯ

Last Updated : Mar 18, 2023, 1:36 PM IST

ABOUT THE AUTHOR

...view details