ಹಜಾರಿಬಾಗ್ (ಜಾರ್ಖಂಡ್):ಇಲ್ಲಿನ ಇಚಕ್ ಬ್ಲಾಕ್‌ನ ಲೋತ್ವಾ ಅಣೆಕಟ್ಟೆಯಲ್ಲಿ 6 ಮಂದಿ ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಸುಮಿತ್ ಕುಮಾರ್, ಶಿವಸಾಗರ್, ಇಶಾನ್ ಸಿಂಗ್ ಮತ್ತು ಮಯಾಂಕ್ ಎಂಬವರ ಮೃತದೇಹಗಳು ದೊರೆತಿವೆ. ಇನ್ನಿಬ್ಬರ ಶವಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಓರ್ವ ವಿದ್ಯಾರ್ಥಿ ಸೋನು ಕುಮಾರ್ ಬದುಕುಳಿದಿದ್ದಾನೆ.
ವಿದ್ಯಾರ್ಥಿಗಳು ಮೌಂಟ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಎಂದಿನಂತೆ ಇಂದೂ ಕೂಡ ಶಾಲೆಗೆಂದು ಮನೆಯಿಂದ ಹೊರಟಿದ್ದರು. ಮಾರ್ಗಮಧ್ಯೆ ಮೋಜುಮಸ್ತಿಯ ನೆನಪಾಗಿ ಹಜಾರಿಬಾಗ್‌ನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಅಣೆಕಟ್ಟೆಗೆ ಸ್ನಾನ ಮಾಡಲೆಂದು ತೆರಳಿದ್ದರು.
ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಣೆಕಟ್ಟೆಗೆ ವಿದ್ಯಾರ್ಥಿಗಳೆಲ್ಲ ಜೊತೆಯಾಗಿ ಬಂದಿದ್ದರು. ಸ್ನೇಹಿತರೆಲ್ಲರೂ ಅಣೆಕಟ್ಟೆಯ ಹೊರಗೆ ತಮ್ಮ ಶಾಲಾ ಉಡುಪು ತೆಗೆದು ನೀರಿಗೆ ಧುಮುಕಿದ್ದಾರೆ. ಇವರಲ್ಲೊಬ್ಬ ತುಂಬಾ ಆಳಕ್ಕಿಳಿದಿದ್ದ. ಆತನನ್ನು ರಕ್ಷಿಸುವ ಯತ್ನದಲ್ಲಿ ಇತರ 5 ಮಕ್ಕಳೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹೊರಭಾಗದಲ್ಲಿ ನಿಂತಿದ್ದ ಸೋನು ಕುಮಾರ್ ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಮಕ್ಕಳ ರಕ್ಷಣೆಗಾಗಿ ಜನರು ಹಾಗೂ ರಕ್ಷಣಾ ತಂಡ ಅಣೆಕಟ್ಟೆಯ ಬಳಿ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಲ್ವರು ಮಕ್ಕಳ ಮೃತದೇಹ ಪತ್ತೆಯಾಗಿದೆ.
ಕೇರಳದಲ್ಲಿ ನಡೆದ ಘಟನೆ:ಕೇರಳದ ತ್ರಿಶೂಲ್ನಲ್ಲಿ ಕಾಲೇಜು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಪುತ್ತೂರು ಕೈನೂರುನ ಕೆರೆಗೆ ಸ್ನಾನಕ್ಕೆಂದು ನಾಲ್ವರು ವಿದ್ಯಾರ್ಥಿಗಳು ಇಳಿದಿದ್ದರು. ನೀರಿನ ಮಟ್ಟ ಬಹಳ ಇದ್ದುದರಿಂದ ನಾಲ್ವರು ಮುಳುಗಿ ಅಸುನೀಗಿದ್ದರು. ಮೃತರನ್ನು ಅರ್ಜುನ್ ಅಲೋಶಿಯಸ್, ಅಬಿ ಜಾನ್, ನಿವೇದ್ ಕೃಷ್ಣ ಮತ್ತು ಜಿಯಾದ್ ಹುಸೇನ್ ಎಂದು ಗುರುತಿಸಲಾಗಿದೆ. ಇವರು ತ್ರಿಶೂರ್‌ನ ಎಲ್ತುರುತ್ ಸೇಂಟ್ ಅಲೋಶಿಯಸ್ ಕಾಲೇಜು ಮತ್ತು ತ್ರಿಶೂರ್ ಸೇಂಟ್ ಥಾಮಸ್ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿದ್ದಾರೆ.
ಇದನ್ನೂ ಓದಿ:ಕೇರಳ: ಸ್ನಾನಕ್ಕೆ ತೆರಳಿದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು