ನವದೆಹಲಿ: ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಅತ್ಯಂತ ವಿಫಲ ವಿದೇಶಾಂಗ ಸಚಿವ ಎಂದು ಟೀಕಿಸಿದೆ. ಚೀನಾ ಕುರಿತಾಗಿ ಸರ್ಕಾರದ ನೀತಿಯ ಬಗ್ಗೆ ಸಚಿವರನ್ನು ಪ್ರಶ್ನಿಸಿದೆ. ನನಗೆ ನಿಮ್ಮೊಂದಿಗೆ ಯಾವುದೇ ವೈಯಕ್ತಿಕ ಸಮಸ್ಯೆಗಳಿಲ್ಲ. ವೈಯಕ್ತಿಕವಾಗಿ ಯಾವುದೇ ಆರೋಪಗಳನ್ನು ಮಾಡುತ್ತಿಲ್ಲ. ಆದರೆ, ಅತ್ಯಂತ ವಿಫಲ ವಿದೇಶಾಂಗ ಸಚಿವ. ನೀವು ಭಾರತದ ವಿದೇಶಾಂಗ ನೀತಿಯನ್ನು ಖಾಸಗಿ ಗುಂಪು ಮತ್ತು ಫೋಟೋ ಶೂಟ್ಗಾಗಿ ವ್ಯಾಪಾರ ಮಾಡುವ ಮಟ್ಟಿಗೆ ಇಳಿಸಿದ್ದೀರಿ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್ ವಾಗ್ದಾಳಿ ಮಾಡಿದ್ದಾರೆ.
ಐಎನ್ಎ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಸಚಿವ ಜೈಶಂಕರ್, ಚೀನಾ ಸೇನೆಗೆ ಪ್ರತಿಯಾಗಿ ಗಡಿಗೆ ಭಾರತೀಯ ಸೇನೆಯನ್ನು ಕಳುಹಿಸಿದ್ದು ರಾಹುಲ್ ಗಾಂಧಿ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದ್ದರು. ಇದರ ಮರು ದಿನವೇ ಕಾಂಗ್ರೆಸ್ ವಕ್ತಾರೆ ಸುದ್ದಿಗೋಷ್ಠಿ ಮಾಡಿ ಆರೋಪಗಳ ಸುರಿಮಳೆ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ. ಆದರೆ, ಭಾರತದಲ್ಲಿ ಇದುವರೆಗೂ ಅಮೆರಿಕದ ರಾಯಭಾರಿ ಇಲ್ಲ ಎಂದು ಕಿಡಿಕಾರಿದರು.
ಇದೇನಾ ವಿದೇಶಾಂಗ ನೀತಿ? ಶ್ರಿನೇಟ್ ಪ್ರಶ್ನೆ: ನೆರೆ ಹೊರೆಯ ರಾಷ್ಟ್ರಗಳ ವಿಷಯವನ್ನೂ ಪ್ರಸ್ತಾಪಿಸಿದ ಶ್ರಿನೇಟ್, ಪಾಕಿಸ್ತಾನಕ್ಕೆ ಪ್ರಧಾನಿ ಹೋಗಿದ್ದರು. ಶ್ರೀಲಂಕಾದಲ್ಲಿ ಚೀನಾ ಹಸ್ತಕ್ಷೇಪ ಮಾಡುತ್ತದೆ. ಭೂತಾನ್ ನಮ್ಮಿಂದ ದೂರ ಸರಿದಿದೆ. ಬಾಂಗ್ಲಾದೇಶವು ಕಾಕ್ಸ್ ಬಜಾರ್‌ನಲ್ಲಿ ನೌಕಾ ನೆಲೆಯನ್ನು ಸ್ಥಾಪಿಸಲು ಚೀನಾವನ್ನು ಕೇಳಿಕೊಂಡಿದೆ. ಇದೇನಾ ವಿದೇಶಾಂಗ ನೀತಿ ಎಂದು ಪ್ರಶ್ನೆ ಮಾಡಿದರು.
ಭಾರತವು ಸಣ್ಣ ಆರ್ಥಿಕತೆ ಮತ್ತು ಚೀನಾ ದೊಡ್ಡ ಆರ್ಥಿಕತೆಯಾಗಿದೆ. ಚೀನಾದೊಂದಿಗೆ ಯುದ್ಧವನ್ನು ಎತ್ತಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂಬ ವಿದೇಶಾಂಗ ಸಚಿವರು ತಮ್ಮ ಸಂದರ್ಶನದಲ್ಲಿ ಎಂದಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚೀನಾದ ಬಗ್ಗೆ ವಿದೇಶಾಂಗ ಸಚಿವರು ಹೇಳಿರುವುದು ಆತಂಕಕಾರಿ. ಜೊತೆಗೆ ಇದು ಭಾರತೀಯ ಸೈನಿಕರ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡಲಿದೆ. ಸಚಿವರು ಸುಳ್ಳು ಹೇಳಬೇಡಿ ಮತ್ತು ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಬೇಡಿ. ಚೀನಾಕ್ಕೆ ಪ್ರಶ್ನೆಗಳನ್ನು ಮಾಡುವ ಬದಲಿಗೆ ನೀವು ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಟೀಕಿಸಿದರು.