ನವದೆಹಲಿ : ಭಾರತದಲ್ಲಿ 2023ರ ಮುಂಗಾರು ಸಾಮಾನ್ಯ ಮಟ್ಟದಲ್ಲಿರಲಿದೆ ಎಂದು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನೇತೃತ್ವದ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದ ಹೊಸ ಯಂತ್ರ ಕಲಿಕೆ ಮಾದರಿಯ ಅಧ್ಯಯನದಲ್ಲಿ ತಿಳಿದು ಬಂದಿದೆ. ಮುಂಬರುವ ಮುಂಗಾರು ಋತುವಿನಲ್ಲಿ ಭಾರತದಾದ್ಯಂತ ಬೇಸಿಗೆ ಮುಂಗಾರು ಮಳೆ (AISMR) ಸುಮಾರು 790 ಮಿ.ಮೀ ಆಗಿರಲಿದೆ ಎಂದು ಇದು ಹೇಳಿದೆ. ಅಂದರೆ ಸಾಮಾನ್ಯ ಮುಂಗಾರು ಇರಲಿದೆ ಎಂದರ್ಥ.
ಈ ಎಐ ಮಾಡೆಲ್ 2002- 2022ರ ಪರೀಕ್ಷಾ ಅವಧಿಗೆ 61.9 ಪ್ರತಿಶತದಷ್ಟು ಗಮನಾರ್ಹವಾದ ಮುನ್ಸೂಚನೆಯ ನಿಖರತೆಯನ್ನು ಪ್ರದರ್ಶಿಸಿದೆ. ಮಾದರಿಯು AISMR ಅನ್ನು ಪ್ರತಿ ವರ್ಷ ಗಮನಿಸಿದ ನೈಜ ಮೌಲ್ಯಗಳಲ್ಲಿ ಪ್ಲಸ್ ಅಥವಾ ಮೈನಸ್ 5 ಪ್ರತಿಶತದೊಳಗೆ ಊಹಿಸಲು ಸಮರ್ಥವಾಗಿದೆಯೇ ಎಂಬುದನ್ನು ಇದು ಆಧರಿಸಿದೆ.
"ಈ ಅಧ್ಯಯನವು ಇಡೀ ದೇಶಕ್ಕೆ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಸಮಯಕ್ಕಿಂತ ಮುಂಚಿತವಾಗಿ ನಿಖರವಾದ ಮುಂಗಾರು ಮುನ್ಸೂಚನೆಯು ಕೃಷಿ, ಇಂಧನ, ಜಲಸಂಪನ್ಮೂಲ, ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಸೇರಿದಂತೆ ವಿವಿಧ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗಿದೆ" ಎಂದು ಪ್ರೊ. ಸರೋಜ್ ಕೆ. ಮಿಶ್ರಾ ಹೇಳಿದರು. ಇವರು DST ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಕ್ಲೈಮೇಟ್ ಮಾಡೆಲಿಂಗ್ ಮತ್ತು ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ಸೈನ್ಸಸ್ ಐಐಟಿ ದೆಹಲಿಯ ಪ್ರೊಫೆಸರ್ ಆಗಿದ್ದಾರೆ.
ದತ್ತಾಂಶ ಚಾಲಿತ ವಿಧಾನಗಳನ್ನು ರಾಜ್ಯವಾರು ಮಾನ್ಸೂನ್ ಮಳೆಯ ಮುನ್ಸೂಚನೆಯನ್ನು ಒದಗಿಸಲು ವಿಸ್ತರಿಸಲಾಗುವುದು. ಇದು ಪ್ರಾದೇಶಿಕ ಅನ್ವಯಗಳಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಪ್ರೊ. ಮಿಶ್ರಾ ತಿಳಿಸಿದರು. ದೇಶದಲ್ಲಿ ಮಾನ್ಸೂನ್ ಮುನ್ಸೂಚನೆಗಳಿಗಾಗಿ ಪ್ರಸ್ತುತ ಭೌತಿಕ ಮಾದರಿಗಳಿಗಿಂತ AI/ML ಮಾದರಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾಬೀತಾಗಿದೆ.