ಪಣಜಿ (ಗೋವಾ): ದೇಶದ ರಾಜಕೀಯದಲ್ಲಿ ಕಾಂಗ್ರೆಸ್ ಗಂಭೀರವಾಗಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಶಕ್ತಿಶಾಲಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಗೋವಾಗೆ ಭೇಟಿ ನೀಡಿರುವ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಬಿಜೆಪಿಯ ದಾದಾಗಿರಿ ಸಾಕಷ್ಟಿದೆ. ಕಾಂಗ್ರೆಸ್ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ದೇಶವು ನರಳುತ್ತಿದೆ ಎಂದು ಹೇಳಿದರು.
ಮೋದಿಯವರು ಕಾಂಗ್ರೆಸ್ಗಿಂತ ಹೆಚ್ಚು ಶಕ್ತಿ ಶಾಲಿಯಾಗಿದ್ದಾರೆ. ಕಾಂಗ್ರೆಸ್, ರಾಜಕೀಯವನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ನಾನು ಏನನ್ನೂ ಹೇಳಲಾರೆ. ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದಕ್ಕೆ ದೇಶದಲ್ಲಿ ಇಂಥ ದುಃಸ್ಥಿತಿ ಬಂದೊದಗಿದೆ.
ಈ ಹಿಂದೆ ಕಾಂಗ್ರೆಸ್ಗೆ ಬಿಜೆಪಿ ವಿರುದ್ಧ ಹೋರಾಡುವ ಅವಕಾಶ ಸಿಕ್ಕಿತ್ತು. ಆದರೆ, ಅವರು ನನ್ನ ವಿರುದ್ಧ ಸ್ಪರ್ಧಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂಬರುವ ಗೋವಾ ಚುನಾವಣೆಯಲ್ಲಿ ಎಲ್ಲಾ 40 ಸ್ಥಾನಗಳಿಗೂ ಸ್ಪರ್ಧಿಸುವುದಾಗಿ ಟಿಎಂಸಿ ಘೋಷಿಸಿದೆ.
ಇದನ್ನೂ ಓದಿ: ಯೋಗಿ ಸರ್ಕಾರ ವಿದ್ಯುತ್ ಬಿಲ್ನಿಂದ ಲೂಟಿ ಹೊಡೆಯುತ್ತಿದೆ: ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಾದೇಶಿಕ ಪಕ್ಷಗಳು ಬಲವಾಗಿರಬೇಕು. ಒಕ್ಕೂಟ ರಚನೆಯು ಬಲವಾಗಿರಬೇಕು. ನಾವು ರಾಜ್ಯಗಳನ್ನು ಬಲಿಷ್ಠಗೊಳಿಸಬೇಕು, ರಾಜ್ಯಗಳು ಬಲಿಷ್ಠವಾಗಿದ್ದರೆ ಕೇಂದ್ರವು ಬಲವಾಗಿರುತ್ತದೆ. ದೆಹಲಿ ಕಾ ದಾದಾಗಿರಿ ಆಮ್ಕಾ ನಾಕಾ (ದೆಹಲಿಯ ಬೆದರಿಸುವಿಕೆ ನಮಗೆ ಬೇಡ), ಸಾಕು ಸಾಕು," ಎಂದು ಹೇಳಿದ್ರು.
ಕಾಂಗ್ರೆಸ್ ಬಗ್ಗೆ ನಾನು ಚರ್ಚಿಸಲು ಹೋಗಲ್ಲ. ಅದು ನನ್ನ ಪಕ್ಷವಲ್ಲ, ನಾನು ಪ್ರಾದೇಶಿಕ ಪಕ್ಷ ಸ್ಥಾಪಿಸಿ ಮೂರು ಬಾರಿ ಸರ್ಕಾರ ರಚಿಸಿದ್ದೇನೆ. ಬೇರೆ ಯಾವುದೇ ರಾಜಕೀಯ ಪಕ್ಷದ ವ್ಯವಹಾರದಲ್ಲಿ ನಾ ಹಸ್ತಕ್ಷೇಪ ಮಾಡಲ್ಲ. ಬಿಜೆಪಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಮ್ಮ ಹೋರಾಟ ಮುಂದುವರಿಯುತ್ತೆ ಎಂದರು.