ನವದೆಹಲಿ:''ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಗಳು ದೇಶದಲ್ಲಿನ ಪ್ರಜಾಪ್ರಭುತ್ವ ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಜನರ ಬಲವಾದ ನಂಬಿಕೆಯನ್ನು ತೋರಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಹೌದು, ಪ್ರಧಾನಿ ಮೋದಿ ಈ ಹೇಳಿಕೆ ನೀಡುತ್ತಿದ್ದಂತೆ ನೆರೆದಿದ್ದ ಸಭಿಕರು, "ಮೋದಿ, ಮೋದಿ, ಮೋದಿ" ಎಂದು ಕೂಗುವ ಮೂಲಕ ಪ್ರತಿಕ್ರಿಯಿಸಿದರು. ಮೂರು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಉತ್ತಮ ಗೆಲವಿಗಾಗಿ ಶ್ರಮಿಸಿದ್ದಾರೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. "ಈಶಾನ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಈ ಭಾಗದಲ್ಲಿ ನಮ್ಮೆಲ್ಲರಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಚುನಾವಣೆ ವೇಳೆ, ಅವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ" ಎಂದು ಪ್ರಧಾನಿ ಮೋದಿ ಹೇಳಿದರು.
ಈಶಾನ್ಯದ ಜನರಿಗೆ ಧನ್ಯವಾದಗಳ ಸಂಕೇತವಾಗಿ ತಮ್ಮ ಮೊಬೈಲ್ ಫೋನ್ನ ಟಾರ್ಚ್ನ್ನು ಆನ್ ಮಾಡಿ ಮತ್ತು ಅವುಗಳನ್ನು ಪ್ರದರ್ಶಿಸುವಂತೆ ಮೋದಿ ಪ್ರೇಕ್ಷಕರನ್ನು ಕೇಳಿಕೊಂಡರು. ಈ ವೇಳೆ ಕಾರ್ಯಕ್ರಮದ ಆವರಣದಲ್ಲಿ ಹೊಸ ಲೋಕವೇ ಸೃಷ್ಟಿಯಾದಂತೆ ಕಾಣಿಸಿತು. ಜನರಿಂದ ಜೋರಾದ ಶಿಳ್ಳೆ, ಚಪ್ಪಾಳೆ ಸದ್ದು ಕೇಳಿಬಂತು.
ಬಿಜೆಪಿಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಮೇಘಾಲಯದ ಜನತೆಗೆ ಧನ್ಯವಾದಗಳು. ರಾಜ್ಯದಲ್ಲಿ ಬಿಜೆಪಿಯ ಹೆಜ್ಜೆಗುರುತುಗಳನ್ನು ವಿಸ್ತರಿಸಲು ಶ್ರಮಿಸುತ್ತಿರುವ ಬಿಜೆಪಿ ಮೇಘಾಲಯ ಘಟಕವನ್ನು ನಾನು ಶ್ಲಾಘಿಸುತ್ತೇನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಜನರಿಗೆ ಸೇವೆ ಸಲ್ಲಿಸಲು ಮತ್ತು ಉಜ್ವಲ ಭವಿಷ್ಯವನ್ನು ಸೃಷ್ಟಿಸಲು ನಿರಂತರವಾಗಿ ಶ್ರಮಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.