ಮಧುರೈ(ತಮಿಳುನಾಡು): ಮಧುರೈನಲ್ಲಿ ರೋಡ್ ಶೋ ನಂತರ ಮಾತನಾಡಿದ ಪ್ರಧಾನಿ ಮೋದಿ, ತಮಿಳುನಾಡು ಸಂಸ್ಕೃತಿ ತುಂಬಾ ಮುಖ್ಯ ಎಂದು ಉಲ್ಲೇಖಿಸಿ ಜಲ್ಲಿಕಟ್ಟು ವಿಚಾರವನ್ನು ಮುನ್ನೆಲೆಗೆ ತಂದರು.
ಇಲ್ಲಿ ಡಿಎಂಕೆ ಸರ್ಕಾರವಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಜಲ್ಲಿಕಟ್ಟು ಸ್ಪರ್ಧೆಯನ್ನು ರದ್ದು ಮಾಡಲಾಗಿತ್ತು. ಯುಪಿಎ ಮೈತ್ರಿಕೂಟದ ಸಚಿವರೊಬ್ಬರು ಜಲ್ಲಿಕಟ್ಟು ಸ್ಪರ್ಧೆಯನ್ನು ಕ್ರೂರ ಎಂದು ಕರೆದಿದ್ದರು ಎಂದು ಕಾಂಗ್ರೆಸ್ ಮತ್ತು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗಿನಿಂದ ಜಲ್ಲಿಕಟ್ಟು ಸ್ಪರ್ಧೆಯನ್ನು ರದ್ದು ಮಾಡಿಲ್ಲ, ಏಕೆಂದರೆ ತಮಿಳುನಾಡು ಸಂಸ್ಕೃತಿ ಅತ್ಯಂತ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ಎನ್ಡಿಎ ಒಕ್ಕೂಟಕ್ಕೆ ಮತ ಹಾಕುವುದರಿಂದ ಈ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಅತಿ ಹೆಚ್ಚು ಕೈಗಾರಿಕೆಗಳು ಈ ರಾಜ್ಯಕ್ಕೆ ಬರುವ ವಾತಾವರಣವನ್ನು ನಾವು ಸೃಷ್ಟಿ ಮಾಡುತ್ತೇವೆ. ಕೃಷಿ ಆಧಾರಿತ ಕೈಗಾರಿಕೆಗಳು ಇಲ್ಲಿನ ರೈತರಿಗೆ ನೆರವಾಗಲಿವೆ ಎಂದು ಭರವಸೆ ನೀಡಿದ್ದಾರೆ.
ಈ ವರ್ಷದ ಕೇಂದ್ರ ಬಜೆಟ್ನಲ್ಲಿ ತಮಿಳುನಾಡಿಗೆ ನೀಡಿದ ಕೊಡುಗೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಮಧುರೈ ಮತ್ತು ಕೊಲ್ಲಂ ನಡುವೆ ಕಾರಿಡಾರ್, ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಹಣವನ್ನು 2009ರ ಬಜೆಟ್ನಲ್ಲಿ ನೀಡಿದ್ದಕ್ಕಿಂತ ಶೇ 238ರಷ್ಟು ಏರಿಕೆ ಮಾಡಲಾಗಿದೆ ಎಂದು ಮೋದಿ ವಿವರಿಸಿದರು.
ಇದನ್ನೂ ಓದಿ :ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆಗೊಳ್ಳಲಿದೆ: ಆರೋಗ್ಯ ಸಚಿವ
ತಮಿಳುನಾಡಿನಲ್ಲಿ ಜಲಜೀವನ್ ಮಿಷನ್ ಜಾರಿ ಬಗ್ಗೆ ಮಾತನಾಡುತ್ತಾ, ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಸುಮಾರು 16 ಲಕ್ಷ ನಳ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. 2024ರ ವೇಳೆಗೆ ದೇಶದ ಪ್ರತಿಯೊಂದು ಮನೆಗೂ ಜಲಜೀವನ್ ಮಿಷನ್ ಅಡಿಯಲ್ಲಿ ನೀರಿನ ಸಂಪರ್ಕ ನೀಡಲಾಗುತ್ತದೆ ಎಂದರು.
ತಮಿಳುನಾಡು ಜನತೆಯನ್ನು ಹೊಗಳಿದ ಪ್ರಧಾನಿ ಮೋದಿ ಇಲ್ಲಿನ ಜನತೆ ಸದೃಢ ದೇಹ ಮತ್ತು ದೊಡ್ಡ ಹೃದಯ ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ. ಇದರ ಜೊತೆಗೆ ವರ್ಷಗಳ ಹಿಂದೆ ನನ್ನ ರಾಜ್ಯ ಗುಜರಾತ್ನಿಂದ ಜನರು ಇಲ್ಲಿ ಬಂದಿದ್ದು, ಇಲ್ಲಿನ ಜನರು ಅವರನ್ನು ಒಪ್ಪಿಕೊಂಡಿದ್ದರು. ಇದು ಏಕ್ ಭಾರತ್ ಮತ್ತು ಶ್ರೇಷ್ಟ ಭಾರತಕ್ಕೆ ಉತ್ತಮ ಉದಾಹರಣೆ ಎಂದಿದ್ದಾರೆ.