ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಇದು ಮಾಸಿಕ ಕಾರ್ಯಕ್ರಮದ 97ನೇ ಆವೃತ್ತಿಯಾಗಿದ್ದು, ದೇಶ, ವಿದೇಶದ ಜನರೊಂದಿಗೆ ಮೋದಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವರು. 2023ರ ಮೊದಲು ರೇಡಿಯೋ ಕಾರ್ಯಕ್ರಮ ಇದಾಗಿದೆ.
ಮನ್ ಕಿ ಬಾತ್ ಕೇಳುವುದು ಹೇಗೆ?:ಕಾರ್ಯಕ್ರಮವು ಆಲ್ ಇಂಡಿಯಾ ರೇಡಿಯೋ, ದೂರದರ್ಶನ, ಎಐಆರ್ ನ್ಯೂಸ್ ವೆಬ್‌ಸೈಟ್ ಮತ್ತು ನ್ಯೂಸ್‌ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಲಿದೆ. ಜೊತೆಗೆ, ಆಲ್ ಇಂಡಿಯಾ ರೇಡಿಯೋ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್ನಲ್ಲಿಯೂ ಲೈವ್-ಸ್ಟ್ರೀಮ್ ಲಭ್ಯವಿದೆ. ಹಿಂದಿ ಭಾಷೆಯಲ್ಲಿ ಪ್ರಸಾರವಾದ ಬಳಿಕ ತಕ್ಷಣವೇ ಪ್ರಾದೇಶಿಕ ಭಾಷೆಗಳಲ್ಲಿ ಎಐಆರ್ ಪ್ರಸಾರ ಮಾಡುತ್ತದೆ.
ಹಿಂದಿನ ಆವೃತ್ತಿಯಲ್ಲಿ ಪ್ರಧಾನಿ ಹೇಳಿದ್ದೇನು?: ಈ ಹಿಂದೆ ಅಂದರೆ ಡಿಸೆಂಬರ್ 25 ರಂದು 2022 ನೇ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, ಟಾಟಾ ಸ್ಮಾರಕ ಕೇಂದ್ರದ ಸಂಶೋಧನೆಯನ್ನು ಉಲ್ಲೇಖಿಸಿದ್ದರು. "ದೇಶದ ಸಾಂಪ್ರದಾಯಿಕ ವಿಧಾನಗಳಾದ ಯೋಗ ಮತ್ತು ಆಯುರ್ವೇದವು ಈಗ ಆಧುನಿಕ ಯುಗದ ಸಾಕ್ಷ್ಯಾಧಾರಿತ ಔಷಧಿಗೆ ಮೂಲವಾಗಿದೆ. 2022ರಲ್ಲಿ ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಮಾನ ಪಡೆದುಕೊಂಡಿದೆ. ಅಂಕಿಅಂಶವನ್ನು ಮೀರಿ 220 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳ ದಾಖಲೆ ಸಾಧಿಸಿದೆ. ಅಲ್ಲದೇ, 400 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡಿದೆ. ದೇಶವು ಸ್ವಾವಲಂಬಿ ಭಾರತ ಎಂಬ ಸಂಕಲ್ಪವನ್ನು ಅಳವಡಿಸಿಕೊಂಡಿದ್ದು, ಅದರಂತೆ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಆಗಿದೆ. ಈ ವರ್ಷ ಬಾಹ್ಯಾಕಾಶ, ಡ್ರೋನ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲೂ ಭಾರತವು ತನ್ನ ವೈಭವವನ್ನು ಸ್ಥಾಪಿಸಿದೆ" ಎಂದು ಬಣ್ಣಿಸಿದ್ದರು.