ಮಥುರಾ(ಉತ್ತರಪ್ರದೇಶ): ಪತಿಯ ಕೈ ಮತ್ತು ಕಾಲಬೆರಳುಗಳನ್ನು ಕೊಡಲಿಯಿಂದ ಕತ್ತರಿಸಿ, ಆ್ಯಸಿಡ್ ಸುರಿದು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಜಿಲ್ಲೆಯ ರಿಫೈನರಿ ಪೊಲೀಸ್ ಠಾಣೆ ವ್ಯಾಪ್ತಿಯ ಧನ ಶಂಶಾಬಾದ್ ಗ್ರಾಮದಲ್ಲಿ ನಡೆದಿದೆ.
"ಗ್ರಾಮದಲ್ಲಿ ವಾಸಿಸುತ್ತಿದ್ದ ದುಷ್ಕರ್ಮಿಗಳು ಹಳೆಯ ದ್ವೇಷದಿಂದಾಗಿ ನನ್ನ ಗಂಡನ ಒಂದು ಕೈಯನ್ನು ಕೊಡಲಿಯಿಂದ ಕತ್ತರಿಸಿ ಆತನ ಕಾಲ್ಬೆರಳುಗಳನ್ನು ತುಂಡರಿಸಿ ದೇಹದ ಮೇಲೆ ಆ್ಯಸಿಡ್ ಸುರಿದಿದ್ದಾರೆ" ಎಂದು ಮಹಿಳೆ ಆರೋಪಿಸಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಆ ಮಹಿಳೆಯ ಮೇಲೆಯೂ ದರೋಡೆಕೋರರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಆ ಬಳಿಕ ಕಿರಾತಕರು ಮತ್ತಷ್ಟು ಹಿಂಸೆ ನೀಡಲು ಪ್ರಾರಂಭಿಸಿದ್ದರಂತೆ. ಇನ್ನು ಸಂತ್ರಸ್ತೆ ಪೊಲೀಸರಿಗೆ ದೂರು ನೀಡುವ ಮೂಲಕ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರನ್ನು ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ:ಮಥುರಾ ಜಿಲ್ಲೆಯ ರಿಫೈನರಿ ಪೊಲೀಸ್ ಠಾಣೆ ವ್ಯಾಪ್ತಿಯ ಧನ ಶಂಶಾಬಾದ್ ಹಳ್ಳಿಯ ನಿವಾಸಿಯಾದ ಮೀರಾ ಎಂಬವರು ಕೆಲವು ದಿನಗಳ ಹಿಂದೆ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಅದೇ ಗ್ರಾಮದ ಕೆಲವರು ಅಡ್ಡಗಟ್ಟಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಈ ಬಳಿಕ ಮೀರಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಅದೇ ಸಮಯದಲ್ಲಿ ದೂರನ್ನು ಹಿಂಪಡೆದುಕೊಳ್ಳುವಂತೆ ಒತ್ತಡ ಬಂದಿದೆ. ಆದರೆ, ಅದಕ್ಕೆ ಒಪ್ಪದ ಸಂದರ್ಭದಲ್ಲಿ ಮೀರಾ ಪತಿ ರಮೇಶ್ನ ಮೇಲೆ ಈ ರೀತಿಯಲ್ಲಿ ದೌರ್ಜನ್ಯ ಎಸಗಲಾಗಿದೆ. ಅಷ್ಟೇ ಅಲ್ಲದೆ ಕೊಲೆ ಬೆದರಿಕೆಯನ್ನೂ ಸಹ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.