ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3ಗೆ ಹಠಾತ್ ಭೇಟಿ ನೀಡಿದ್ದರು. ಭೇಟಿಯ ನಂತರ ಸಂಬಂಧಿಸಿದ ಪಾಲುದಾರರೊಂದಿಗೆ ಅವರು ಪರಿಶೀಲನಾ ಸಭೆ ನಡೆಸಿದ್ದು, ಸಭೆಯ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ವಿಮಾನ ಪ್ರಯಾಣಿಕರ ಪ್ರಯಾಣವನ್ನು ಸುಲಭವಾಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಪ್ರಮುಖ ಟರ್ಮಿನಸ್‌ನಲ್ಲಿ ಜನದಟ್ಟಣೆ ಉಂಟಾಗುತ್ತಿರುವ ಬಗ್ಗೆ ವಿಮಾನ ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ದೂರುತ್ತಿರುವ ಹಿನ್ನೆಲೆಯಲ್ಲಿ ಅವರ ಭೇಟಿ ಮತ್ತು ಹೇಳಿಕೆ ಮಹತ್ವ ಪಡೆದಿವೆ.
ಇಂದು ನಾವು ಪ್ರವೇಶ ದ್ವಾರಗಳ ಸಂಖ್ಯೆಯನ್ನು 14 ರಿಂದ 16 ಕ್ಕೆ ಹೆಚ್ಚಿಸಿದ್ದೇವೆ. ವಿಮಾನ ನಿಲ್ದಾಣದ ಒಳಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅಲ್ಲಿ ಪ್ರವೇಶದ ಮೊದಲು ಪ್ರತಿ ಪ್ರವೇಶ ಗೇಟ್‌ನಲ್ಲಿ ವೇಟಿಂಗ್ ಟೈಮ್ ಅನ್ನು ಪ್ರದರ್ಶಿಸುವ ಸೈನ್‌ಬೋರ್ಡ್ ಇರಿಸಬೇಕೆಂದು ನಿರ್ಧರಿಸಿದ್ದೇವೆ. ಯಾವ ಗೇಟ್‌ನಲ್ಲಿ ಅತಿ ಕಡಿಮೆ ವೇಟಿಂಗ್ ಟೈಮ್ ಇದೆ ಎಂಬುದನ್ನು ತಿಳಿಯಲು ಪ್ರಯಾಣಿಕರಿಗೆ ಇದರಿಂದ ಸಹಾಯಕವಾಗಲಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.