ವಿರಾಟ್‌ನಗರ (ಜೈಪುರ):ಹಾಲಿನ ಟ್ಯಾಂಕರ್ವೊಂದು ಉರುಳಿ ಬಿದ್ದಿದ್ದು, ಹಾಲು ರಸ್ತೆಪಾಲಾಗಿರುವ ಘಟನೆ ಜೈಪುರ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಭಾಬ್ರೂ ಗ್ರಾಮದ ಬಳಿ ನಡೆದಿದೆ.
ಟ್ಯಾಂಕರ್ ಪಲ್ಟಿಯಾಗಿ ರಸ್ತೆಯಲ್ಲಿ ಹರಿದ ಹಾಲು... ಪಾತ್ರೆಗಳಲ್ಲಿ ತುಂಬಿಕೊಂಡು ಹೋದ ಜನ! ವಿಡಿಯೋ - ಜೈಪುರಿನಲ್ಲಿ ಪಲ್ಟಿಯಾದ ಹಾಲಿನ ಟ್ಯಾಂಕರ್
ನಿಯಂತ್ರಣ ತಪ್ಪಿ ರಸ್ತೆ ಮೇಲೆ ಉರುಳಿ ಬಿದ್ದ ಟ್ಯಾಂಕರ್ನಿಂದ ಹಾಲು ಸೋರಿಕೆಯಾಗಿ ನದಿಯಂತೆ ಹರಿದಿದ್ದು, ಹಾಲಿಗಾಗಿ ಗ್ರಾಮಸ್ಥರು ಮುಗಿಬಿದ್ದ ಘಟನೆ ರಾಜಸ್ಥಾನದ ವಿರಾಟ್ನಗರದಲ್ಲಿ ನಡೆದಿದೆ.
ಟ್ಯಾಂಕರ್ ಚಾಲಕ ಸಂವಾರ ಸರಸ್ ಡೈರಿಯಿಂದ ಹಾಲನ್ನು ತುಂಬಿಸಿಕೊಂಡು ಭಿಲ್ವಾರಾದಿಂದ ದೆಹಲಿ ಕಡೆಗೆ ಹೋಗುತ್ತಿದ್ದ. ಭಾಬ್ರೂ ಗ್ರಾಮ ತಲುಪಿದಾಗ ಟ್ಯಾಂಕರ್ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಈ ವೇಳೆ ಟ್ಯಾಕರ್ನ ಮುಚ್ಚಳ ಓಪನ್ ಆಗಿದ್ದು, ಟ್ಯಾಂಕರ್ನಿಂದ ರಸ್ತೆ ಮೇಲೆ ನದಿಯಂತೆ ಹಾಲು ಹರಿದಿದೆ ಎಂದು ಭಾಬ್ರೂ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಹಾಲು ರಸ್ತೆ ಪಾಲಾಗುತ್ತಿರುವುದರ ಬಗ್ಗೆ ತಿಳಿದ ಸ್ಥಳೀಯರು ಪಾತ್ರೆಗಳನ್ನು ಹಿಡಿದು ಸ್ಥಳಕ್ಕೆ ದೌಡಾಯಿಸಿದರು. ಬಳಿಕ ಸ್ಥಳೀಯರು ಕೊರೊನಾ ಭಯವಿಲ್ಲದೇ ಪಾತ್ರೆಗಳ ಮೂಲಕ ಹಾಲು ತೆಗೆದುಕೊಳ್ಳಲು ಮುಗಿಬಿದ್ದರು. ಈ ಘಟನೆ ಬಗ್ಗೆ ನಮಗೆ ಮಾಹಿತಿ ತಿಳಿಯಿತು. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಕ್ರೇನ್ ಸಹಾಯದಿಂದ ಟ್ಯಾಂಕರ್ ಮೇಲೆತ್ತಿದ್ದೇವೆ. ಈ ಘಟನೆಯಲ್ಲಿ ಸಾಕಾಷ್ಟು ಹಾಲು ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.