ನವದೆಹಲಿ:ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಬೆಳವಣಿಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಿಜೆಪಿ ತೊರೆದು ಇತ್ತೀಚೆಗಷ್ಟೇ ಟಿಎಂಸಿ ಸೇರಿದ್ದ ಶಾಸಕ ಮುಕುಲ್ ರಾಯ್‌ಗೆ ನೀಡಿದ್ದ ಝೆಡ್ ಪ್ಲಸ್ ಶ್ರೇಣಿಯ ವಿಐಪಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಸಿಆರ್‌ಪಿಎಫ್‌ಗೆ ನಿರ್ದೇಶನ ನೀಡಿದ್ದು, ಕೂಡಲೇ ಭದ್ರತೆ ವಾಪಸ್ ಪಡೆಯುವಂತೆ ಸೂಚಿಸಿದೆ.
ಕಳೆದ ವಾರ ಕೋಲ್ಕತ್ತದಲ್ಲಿ ಮುಕುಲ್ ರಾಯ್ ಬಿಜೆಪಿ ತೊರೆದು ತಮ್ಮ ಪುತ್ರ ಸುಬ್ರಂಗ್ಶು ಜೊತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಟಿಎಂಸಿಗೆ ಸೇರ್ಪಡೆಯಾಗಿದ್ದರು.
ಕೃಷ್ಣಾನಗರ ಉತ್ತರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದಿದ್ದ ರಾಯ್ ಮತ್ತೆ ತವರು ಪಕ್ಷಕ್ಕೆ ವಾಪಸ್ ಆಗಿದ್ರು. ತಮಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯುವಂತೆ ಕೇಂದ್ರವನ್ನು ಕೋರಿದ್ದರು. ಸದ್ಯ ಇವರ ಮನವಿಗೆ ಸ್ಪಂಧಿಸಿರುವ ಸರ್ಕಾರ ಭದ್ರತೆಯನ್ನು ವಾಪಸ್ ಪಡೆದಿದೆ.
ಇದನ್ನೂ ಓದಿ: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಸ್ಥಾನದಿಂದ ಅಜರುದ್ದೀನ್ ವಜಾ
ಈ ಮೊದಲು ಟಿಎಂಸಿಯಲ್ಲೇ ಇದ್ದ ಮುಕುಲ್ ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. 2017ರ ನವೆಂಬರ್ ನಲ್ಲಿ ಕೇಸರಿ ಪಕ್ಷ ಸೇರಿ, ಅಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆಗ ವೈ ಪ್ಲಸ್ ಭದ್ರತೆ ಹೊಂದಿದ್ದ ರಾಯ್‌ಗೆ ಇದೇ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಝೆಡ್ ಪ್ಲಸ್ ಶ್ರೇಣಿಯ ಭದ್ರತೆಯನ್ನು ನೀಡಲಾಗಿತ್ತು.
ಬಂಗಾಳದಲ್ಲಿ ರಾಯ್ ಎಲ್ಲೇ ಸಂಚಾರ ಮಾಡಿದ್ರೂ ಅವರಿಗೆ ಸುಮಾರು 22 ರಿಂದ 24 ಮಂದಿ ಶಸ್ತ್ರ ಸಜ್ಜಿತ ಸಿಆರ್‌ಪಿಎಫ್ ಯೋಧರು ಭದ್ರತೆ ನೀಡುತ್ತಿದ್ದರು. ಇವರ ಪುತ್ರ ಸುಬ್ರಂಗ್ಶುಗೆ ನೀಡಿದ್ದ ಕಡಿಮೆ ಶ್ರೇಣಿಯ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದು, ಭಾರಿ ಕುತೂಹಲ ಮೂಡಿಸಿದೆ.