ಮಹಾರಾಷ್ಟ್ರ:ಕುಡಿದ ಮತ್ತಿನಲ್ಲಿ ಜನರು ಏನು ಮಾಡ್ತಾರೆ ಎಂಬುದೇ ತಿಳಿಯದು. ಹೊಟ್ಟೆಯೊಳಗಿದ "ಪರಮಾತ್ಮ" ಆಡಿಸುವ ಆಟದಿಂದ ರಾದ್ಧಾಂತವೇ ಸೃಷ್ಟಿಸುತ್ತಾರೆ. ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ಪುಣೆಯಲ್ಲಿರುವ ಗೂಗಲ್ ಕಚೇರಿಯಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಡೀ ಕಚೇರಿ ತಪಾಸಿಸಿದ್ದಾರೆ. ಬಳಿಕ ಇದೊಂದು ಹುಸಿ ಕರೆ ಎಂದು ಗೊತ್ತಾಗಿದೆ. ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ.
ಏನಾಯ್ತು:ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಗೂಗಲ್ ಕಚೇರಿಗೆ ವ್ಯಕ್ತಿಯೊಬ್ಬ ಭಾನುವಾರ ಕರೆ ಮಾಡಿ, ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿರುವ ಗೂಗಲ್ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಗಾಬರಿಗೊಂಡ ಅಲ್ಲಿನ ಸಿಬ್ಬಂದಿ ತಕ್ಷಣವೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್ ಇಟ್ಟ ಕರೆಯಂತೆ ಪುಣೆ ಗೂಗಲ್ ಇಡೀ ಕಚೇರಿಯನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ.
ಬಾಂಬ್ ಪತ್ತೆ ದಳದ ವ್ಯಾಪಕ ತಪಾಸಣೆ ನಡೆಸಲಾಯಿತು. ಕಚೇರಿಯಲ್ಲಿ ಎಲ್ಲೂ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಯಾವುದೇ ಬಾಂಬ್ ಕೂಡ ಇರಲಿಲ್ಲ. ಆಗ ಇದೊಂದು ಹುಸಿ ಕರೆ ಎಂದು ಖಚಿತವಾಗಿದೆ. ಇದರ ವಿರುದ್ಧ ಗೂಗಲ್ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹುಸಿ ಕರೆ ಬಂದ ನೆಟ್ವರ್ಕ್ ಹಿಡಿದು ತನಿಖೆ ನಡೆಸಿದಾಗ ಹೈದರಾಬಾದ್ನಿಂದ ಕರೆ ಬಂದಿದ್ದು ಗೊತ್ತಾಗಿದೆ.
ಹೈದರಾಬಾದ್ ತಲುಪಿದ ಮುಂಬೈ ಪೊಲೀಸರು, ಪಣ್ಯಂ ಬಾಬು ಶಿವಾನಂದ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆತ ಕುಡಿದ ಅಮಲಿನಲ್ಲಿ ಕರೆ ಮಾಡಿದ್ದಾಗಿ ಹೇಳಿದ್ದಾನೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.