ಕರ್ನಾಟಕ

karnataka

Menstrual Hygiene Policy: ಋತುಚಕ್ರ ನೈರ್ಮಲ್ಯ ನೀತಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

By

Published : Jul 25, 2023, 8:27 AM IST

Menstrual Hygiene Policy: ಕೇಂದ್ರ ಶಾಲಾ ಬಾಲಕಿಯರ ಋತುಚಕ್ರದ ನೈರ್ಮಲ್ಯ ನೀತಿಗಳ ಕುರಿತು ಪ್ರತಿಕ್ರಿಯೆ ಸಲ್ಲಿಸದೇ ಇರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್​ ಎಚ್ಚರಿಕೆ ನೀಡಿದೆ.

sc-directs-states-uts-to-submit-their-responses-on-menstrual-hygiene-policies-by-aug-31
ಋತುಚಕ್ರದ ನೈರ್ಮಲ್ಯ ನೀತಿಗಳ ಕುರಿತು ಪ್ರತಿಕ್ರಿಯೆ ನೀಡಲು ನಿರ್ದೇಶಿಸಿದ ಸುಪ್ರೀಂ

ನವದೆಹಲಿ: ಶಾಲೆಗಳಲ್ಲಿ ಓದುತ್ತಿರುವ ಬಾಲಕಿಯರ ಋತುಚಕ್ರದ ನೈರ್ಮಲ್ಯದ ಬಗ್ಗೆ ಏಕರೂಪದ ರಾಷ್ಟ್ರೀಯ ನೀತಿಯನ್ನು ರೂಪಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆಗಸ್ಟ್ 31ರೊಳಗೆ ಕೇಂದ್ರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೋರ್ಟ್​ ತಾಕೀತು ಮಾಡಿದೆ.

ಈ ಹಿಂದೆ ಸುಪ್ರೀಂ ಕೋರ್ಟ್​ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶಾಲಾ ಬಾಲಕಿಯರ ಋತುಚಕ್ರದ ನೈರ್ಮಲ್ಯ ನೀತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಇನ್ನೂ ಈ ಬಗ್ಗೆ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರತಿಕ್ರಿಯೆ ಸಲ್ಲಿಸಿಲ್ಲ. ಹೀಗಾಗಿ ರಾಜ್ಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕೋರ್ಟ್,​ ಆಗಸ್ಟ್​ 31ರೊಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ತಾಕೀತು ಮಾಡಿದೆ. ಈ ಗಡುವು ಮೀರಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಕೇವಲ ನಾಲ್ಕು ರಾಜ್ಯಗಳು ಋತುಚಕ್ರದ ನೈರ್ಮಲ್ಯ ನೀತಿಯ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿವೆ ಎಂದು ಇದೇ ವೇಳೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿತು.

ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ ಹಾಗು ಉತ್ತರ ಪ್ರದೇಶ ರಾಜ್ಯಗಳು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​, ನ್ಯಾ.ಜೆ.ಬಿ.ಪರ್ದಿವಾಲಾ ಮತ್ತು ನ್ಯಾ.ಮನೋಜ್​ ಮಿಶ್ರಾ ಅವರಿದ್ದ ಪೀಠ ಈ ಆದೇಶ ಮಾಡಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಋತುಚಕ್ರದ ನೈರ್ಮಲ್ಯ ನೀತಿ ಕುರಿತು 2023ರ ಆಗಸ್ಟ್ 31ರೊಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ನಿರ್ದೇಶನ ನೀಡಲಾಗುತ್ತಿದೆ ಎಂದು ಕೋರ್ಟ್​ ಹೇಳಿದೆ.​

ಈ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, 2023 ಏಪ್ರಿಲ್ 10ರ ಆದೇಶದ ಪ್ರಕಾರ ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಋತುಚಕ್ರದ ನೈರ್ಮಲ್ಯ ನೀತಿ ಕುರಿತು ತನ್ನ ಪ್ರತಿಕ್ರಿಯೆಗಳನ್ನು ಸಲ್ಲಿಸಿವೆ ಎಂದು ತಿಳಿಸಿದರು. ಯಾವುದೇ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಪ್ರತಿಕ್ರಿಯೆ ಸಲ್ಲಿಸಲು ವಿಫಲವಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನವೆಂಬರ್​ 6ಕ್ಕೆ ಪಟ್ಟಿ ಮಾಡಿದೆ.

ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಏಕರೂಪದ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿದೆ. ಎಲ್ಲ ರಾಜ್ಯಗಳನ್ನು ಇದರಲ್ಲಿ ಒಳಗೊಳ್ಳುವಂತೆ ತಿಳಿಸಿದೆ. 6ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ನೀಡಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ಕೇಂದ್ರ ಸರ್ಕಾರವು ಶಾಲೆಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳಿಗೆ ಗುಣಮಟ್ಟದ ಸ್ಯಾನಿಟರಿ ಪ್ಯಾಡ್​ಗಳು ಮತ್ತು ವೆಂಡಿಂಗ್​ ಮೆಷಿನ್​ಗಳನ್ನು ನೀಡುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸುವಂತೆ ನ್ಯಾಯಾಲಯದಲ್ಲಿ ಕೋರಿತ್ತು. ಸುಪ್ರೀಂ ಕೋರ್ಟ್​ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಋತುಚಕ್ರದ ನೈರ್ಮಲ್ಯ ನೀತಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮತ್ತೆ ಕೋರಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ದೂರದಾರ ಸಾಮಾಜಿಕ ಕಾರ್ಯಕರ್ತೆ ಜಯಾ ಠಾಕೂರ್​, "ಹದಿಹರೆಯದ ಹೆಣ್ಣುಮಕ್ಕಳು ಋತು ಚಕ್ರ ಮತ್ತು ಋತುಚಕ್ರದ ನೈರ್ಮಲ್ಯದ ಬಗ್ಗೆ ತಮ್ಮ ಪೋಷಕರಿಂದ ಸರಿಯಾದ ಶಿಕ್ಷಣವನ್ನು ಹೊಂದಿರುವುದಿಲ್ಲ. ಆರ್ಥಿಕ ಸ್ಥಿತಿ ಮತ್ತು ಮಾಹಿತಿಯ ಕೊರತೆ ಅನೈರ್ಮಲ್ಯ ಮತ್ತು ಅನಾರೋಗ್ಯಕರ ಅಭ್ಯಾಸ ಹರಡುವಿಕೆಗೆ ಕಾರಣವಾಗುತ್ತದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಎಲ್ಲ ಸರ್ಕಾರಿ, ಅನುದಾನಿತ ಮತ್ತು ವಸತಿ ಶಾಲೆಗಳಲ್ಲಿ ಪ್ರತ್ಯೇಕ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಿಸಬೇಕು. ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಒಬ್ಬ ವ್ಯಕ್ತಿಯನ್ನು ನೇಮಿಸಬೇಕು. ಅಲ್ಲದೆ ಈ ಕುರಿತು ಜಾಗೃತಿ ಮೂಡಿಸಲು ಮೂರು ಹಂತಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕು" ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ :ಕೇಂದ್ರ ಪಡೆ ಇನ್ನೂ 10 ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲೇ ಇರಿಸುವ ನಿರ್ಧಾರಕ್ಕೆ ಕಲ್ಕತ್ತಾ ಹೈಕೋರ್ಟ್​ ಅಸ್ತು

ABOUT THE AUTHOR

...view details