ಶಿಲ್ಲಾಂಗ್(ಮೇಘಾಲಯ):ಸರ್ಕಾರಿ ನೌಕರಿ ಪಡೆದುಕೊಳ್ಳಬೇಕೆಂಬುದು ಬಹುತೇಕ ಅಭ್ಯರ್ಥಿಗಳ ಕನಸು ಆಗಿರುತ್ತದೆ. ಆದರೆ, ವಯಸ್ಸಿನ ನಿರ್ಬಂಧದಿಂದಾಗಿ ಸಾಕಷ್ಟು ಆಕಾಂಕ್ಷಿಗಳ ಕನಸು ಈಡೇರುವುದಿಲ್ಲ. ಆದರೆ, ಮೇಘಾಲಯ ಸರ್ಕಾರ ಅಂತಹ ಅಭ್ಯರ್ಥಿಗಳಿಗೆ ಇದೀಗ ಭರ್ಜರಿ ಗಿಫ್ಟ್ ನೀಡಿದೆ.
ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಬಯಸುವ ಆಕಾಂಕ್ಷಿಗಳ ಗರಿಷ್ಠ ವಯೋಮಿತಿ 27 ವರ್ಷದಿಂದ 32ಕ್ಕೆ ಏರಿಕೆ ಮಾಡಲಾಗಿದ್ದು(ಸಾಮಾನ್ಯ ವರ್ಗ), ಬುಡಕಟ್ಟು ಜನಾಂಗದ ಉದ್ಯೋಗಾಕಾಂಕ್ಷಿಗಳ ಗರಿಷ್ಠ ವಯಸ್ಸಿನ ಮಿತಿ ಇದೀಗ 37 ವರ್ಷಕ್ಕೆ ಏರಿಕೆ ಮಾಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಇದಕ್ಕೆ ಸಂಬಂಧಿಸಿದಂತೆ ಮೇಘಾಲಯ ಸಿಎಂ ಕಾನ್ರಾಡ್ ಕೆ ಸಂಗ್ಮಾ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಈ ನಿಯಮ ಪೊಲೀಸ್, ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ಸೇರಿದಂತೆ ಕೆಲವೊಂದು ಇಲಾಖೆಗಳಿಗೆ ಅನ್ವಯವಾಗುವುದಿಲ್ಲ. ಪ್ರಮುಖವಾಗಿ ಪೊಲೀಸ್ ಇಲಾಖೆಯಲ್ಲಿ ದೈಹಿಕ ಸಾಮರ್ಥ್ಯ ಸಾಬೀತು ಪಡಿಸುವುದು ಅಗತ್ಯವಾಗಿರುವ ಕಾರಣ ಇದು ಅನ್ವಯಿಸುವುದಿಲ್ಲ ಎಂದು ಸಂಗ್ಮಾ ಟ್ವೀಟ್ ಕೂಡ ಮಾಡಿದ್ದಾರೆ.
ಇದರ ಜೊತೆಗೆ ಗ್ರಾಮೀಣ ಮಟ್ಟದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಆರೋಗ್ಯ ಕೌನ್ಸಿಲ್ ನೀತಿಗೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮೇಘಾಲಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತದಾರರನ್ನ ಸೆಳೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.