ದರ್ಭಂಗಾ, ಬಿಹಾರ :ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರಾಸಾಯನಿಕಗಳನ್ನು ಮಾರುವ ಅಂಗಡಿಗಳ ಮಾಲೀಕರೊಡನೆ ಘರ್ಷಣೆ ನಡೆದು ಸುಮಾರು 10 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ದರ್ಭಂಗಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆಯಲ್ಲಿ ಹಲವು ರಾಸಾಯನಿಕ ಮಾರುವ ಅಂಗಡಿಗಳಿಗೆ ದರ್ಭಂಗಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಬೆಂಕಿ ಹಚ್ಚಿದ್ದು, ಹಲವು ಅಂಗಡಿಗಳು ಸಂಪೂರ್ಣವಾಗಿ ನಾಶವಾಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಉಪ ವಿಭಾಗಾಧಿಕಾರಿ ಕೃಷ್ಣ ಕುಮಾರ್, ಶುಕ್ರವಾರ ರಾತ್ರಿ ದರ್ಭಾಂಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಮತ್ತು ಅಂಗಡಿಯ ಮಾಲೀಕರ ನಡುವೆ ವಾಗ್ವಾದ ನಡೆದಿದೆ. ಸ್ವಲ್ಪ ಸಮಯದ ನಂತರ ವಿದ್ಯಾರ್ಥಿಗಳ ಗುಂಪು ಸ್ಥಳಕ್ಕೆ ಆಗಮಿಸಿ, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು : ಹೈಕಮಾಂಡ್ ಭೇಟಿಯಾಗಲಿರುವ ಸಿಎಂ ಯೋಗಿ
ಅಂಗಡಿಗಳಿಗೆ ಬೆಂಕಿ ಹಚ್ಚಿದ ವೈದ್ಯಕೀಯ ವಿದ್ಯಾರ್ಥಿಗಳ ಕೃತ್ಯವನ್ನು ಸ್ಥಳೀಯರು ವಿರೋಧಿಸಿದಾಗ, ವಿದ್ಯಾರ್ಥಿಗಳು ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಜನರೂ ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕೃಷ್ಣ ಕುಮಾರ್ ಹೇಳಿದ್ದಾರೆ. ಸ್ಥಳದಲ್ಲಿದ್ದ ಜನರ ಪ್ರಕಾರ ಈ ವೇಳೆ ಫೈರಿಂಗ್ನ ಶಬ್ದವೂ ಈ ವೇಳೆ ಕೇಳಿಬಂದಿದೆ.
ಮಾದಕ ವಸ್ತುವಿಗಾಗಿ..?:ಘಟನೆಯ ಬಳಿಕ ಶನಿವಾರ ಬೆಳಗ್ಗೆ ಔಷಧ ವ್ಯಾಪಾರಿಗಳ ಸಂಘ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ, ಆಸ್ಪತ್ರೆ ರಸ್ತೆ ತಡೆದು ಪ್ರತಿಭಟನೆ ನಡೆಸಿದೆ. ಈ ವೇಳೆ ಮಾತನಾಡಿದ ಅಂಗಡಿ ಮಾಲೀಕ 'ವೈದ್ಯಕೀಯ ವಿದ್ಯಾರ್ಥಿಯೊಬ್ಬ ಅಂಗಡಿಗೆ ಬಂದು ಡ್ರಗ್ಸ್ ನೀಡುವಂತೆ ಒತ್ತಾಯಿಸಿದನು.
ನಾನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದಾಗ ವಾಗ್ವಾದ ಆರಂಭಿಸಿದ್ದಾನೆ. ನಂತರ ತನ್ನ ಸ್ನೇಹಿತರಿಗೆ ಕರೆ ಮಾಡಿ, ಸ್ಥಳಕ್ಕೆ ಕರೆಸಿಕೊಂಡು ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ನಂತರ ಅಂಗಡಿಗಳಿಗೆ ಬೆಂಕಿ ಇಟ್ಟಿದ್ದಾರೆ' ಎಂದು ಆರೋಪಿಸಿದ್ದಾರೆ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಡಿಎಂಸಿಎಚ್) ಪ್ರಾಂಶುಪಾಲ ಕೃಪಾನಾಥ್ ಮಿಶ್ರಾ ಈ ಕುರಿತು ಪ್ರತಿಕ್ರಿಯೆ ನೀಡಿ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಶುಕ್ರವಾರ ರಾತ್ರಿಯೇ ಭಯದಿಂದ ಬೇರೆಡೆ ತೆರಳಿದ್ದಾರೆ. ಶನಿವಾರ ಬೆಳಗ್ಗೆಯಿಂದ ತುರ್ತು ಸೇವೆ ಮತ್ತೆ ಆರಂಭಿಸಲಾಗಿದೆ. ಈ ಕುರಿತು ಸಭೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.