ಕರ್ನಾಟಕ

karnataka

ETV Bharat / bharat

5 ಬಾರಿ ಸಂಸದರಾದ ರಾಜಕಾರಣಿಯ ಪತ್ನಿಗೆ ಸೋಲುಣಿಸಿದ ಮೆಡಿಕಲ್​ ವಿದ್ಯಾರ್ಥಿನಿಗೆ ಮೇಯರ್​ ಪಟ್ಟ! - ಅಚ್ಚರಿ ಫಲಿತಾಂಶ

ಬಿಹಾರದಲ್ಲೊಂದು ಅಚ್ಚರಿಯ ಚುನಾವಣಾ ಫಲಿತಾಂಶ- ಸಂಸದರ ಪತ್ನಿಗೆ ಸೋಲುಣಿಸಿದ ಮೆಡಿಕಲ್​ ವಿದ್ಯಾರ್ಥಿನಿ- ಮೊದಲ ಗೆಲುವಿನಲ್ಲೇ ಮೇಯರ್​ ಪಟ್ಟಕ್ಕೇರಿದ ಯುವತಿ

medical-student-stuns-wife-of-5-time-mps-wife-wins-chief-mayoral-post-in-urban-local-body-polls-in-bihars-araria
5 ಬಾರಿ ಸಂಸದರಾದ ರಾಜಕಾರಣಿಯ ಪತ್ನಿಗೆ ಸೋಲುಣಿಸಿದ 21 ವರ್ಷದ ವಿದ್ಯಾರ್ಥಿನಿಗೆ ಮೇಯರ್​ ಪಟ್ಟ

By

Published : Dec 31, 2022, 6:04 PM IST

ಅರಾರಿಯಾ (ಬಿಹಾರ): ಬಿಹಾರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಐದು ಬಾರಿ ಸಂಸದರಾದ ಹಿರಿಯ ರಾಜಕಾರಣಿಯೊಬ್ಬರ ಪತ್ನಿಗೆ 21 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸೋಲುಣಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ಹೌದು, ಅರಾರಿಯಾದಲ್ಲಿ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ 21 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸನ್ನು ಕುಮಾರಿ ಮೇಯರ್​ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಐದು ಬಾರಿ ಸಂಸದ ಸುಖದೇವ್ ಪಾಸ್ವಾನ್ ಅವರ ಪತ್ನಿ ನೀಲಮ್ ದೇವಿ ವಿರುದ್ಧ 2,193 ಮತಗಳಿಂದ ಸನ್ನು ಕುಮಾರಿ ಅಚ್ಚರಿ ಗೆಲುವು ದಾಖಲಿಸಿದ್ದಾರೆ.

ಬಿಹಾರದ 23 ಜಿಲ್ಲೆಗಳಲ್ಲಿ ಡಿಸೆಂಬರ್ 18 ಮತ್ತು 28ರಂದು ಎರಡು ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದಿದ್ದವು. ಇದರಲ್ಲಿ ಮೇಯರ್​ ಮತ್ತು ಉಪ ಮೇಯರ್​ ಹುದ್ದೆಗಳಿಗೂ ಮತದಾನ ನಡೆದಿತ್ತು. ಡಿ.30ರಂದು ಈ ಚುನಾವಣಾ ಫಲಿತಾಂಶಗಳು ಪ್ರಕಟವಾಗಿವೆ. ನರ್ಪತಗಂಜ್ ನಗರ ಪಂಚಾಯಿತಿಯಲ್ಲಿ ಎಸ್​ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಸನ್ನು ಕುಮಾರಿ ಚುನಾವಣಾ ಕಣಕ್ಕೆ ಧುಮುಕಿದ್ದರು.

ವೈದ್ಯಕೀಯ ವಿದ್ಯಾರ್ಥಿನಿ ಸನ್ನು ಕುಮಾರಿ

ಸನ್ನು ಕುಮಾರಿ ಸ್ಪರ್ಧೆಯಿಂದ ಈ ಕ್ಷೇತ್ರದ ತುಂಬಾ ಕುತೂಹಲ ಕೆರಳಿಸಿತ್ತು. ಯಾಕೆಂದರೆ, ಇಲ್ಲಿ ಕಣದಲ್ಲಿದ್ದವರು ಐದು ಬಾರಿ ಸಂಸದರಾದ ಸುಖದೇವ್ ಪಾಸ್ವಾನ್ ಅವರ ಪತ್ನಿ ನೀಲಮ್ ದೇವಿ. ಹೀಗಾಗಿ ಚುನಾವಣೆಯಲ್ಲಿ ಸನ್ನು ಕುಮಾರಿ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಗಿತ್ತು. ಆದರೂ, ದರ್ಬಾಂಗಾ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಸನ್ನು ಕುಮಾರಿ ಜನಾದೇಶದಲ್ಲಿ ಗೆದ್ದು ಬೀಗಿದ್ದಾರೆ.

5,493 ಮತ ಪಡೆದ ವಿದ್ಯಾರ್ಥಿನಿ: ಚುನಾವಣಾ ಫಲಿತಾಂಶದಲ್ಲಿ ಭಾರಿ ಅಂತರದಿಂದ ಸನ್ನು ಕುಮಾರಿ ಜಯ ಗಳಿಸಿದ್ದಾರೆ. ಒಟ್ಟು 5,493 ಮತಗಳನ್ನು ವಿದ್ಯಾರ್ಥಿನಿ ಪಡೆದಿದ್ದರೆ, ಎದುರಾಳಿ ಸಂಸದ ಸುಖದೇವ್ ಪಾಸ್ವಾನ್ ಅವರ ಪತ್ನಿ ನೀಲಮ್ ದೇವಿ 3,300 ಮತಗಳನ್ನು ಮಾತ್ರ ಪಡೆಯುವಲ್ಲಿ ಸಾಧ್ಯವಾಗಿದೆ. ಈ ಮೂಲಕ ಒಟ್ಟಾರೆ 2,193 ಮತಗಳ ಅಂತರದಿಂದ ಗೆದ್ದಿರುವ ಸನ್ನು ಕುಮಾರಿ ಸಂಸದರ ಪತ್ನಿಗೆ ಶಾಕ್​ ನೀಡಿದ್ದಾರೆ.

ಇದಲ್ಲದೇ, ಮೇಯರ್​ ಪಟ್ಟವನ್ನೂ ತಮ್ಮ 21ನೇ ವಯಸ್ಸಿಗೆ ಸನ್ನು ಕುಮಾರಿ ಅಲಂಕರಿಸಿದ್ದಾರೆ. ಇತ್ತ, ಉಪ ಮೇಯರ್​​ ಚುನಾವಣೆಯಲ್ಲಿ ಕುಂತಿ ದೇವಿ ಎಂಬುವರು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಫೂಲ್ ಕುಮಾರಿ ದೇವಿ ಅವರನ್ನು 40 ಮತಗಳಿಂದ ಕುಂತಿ ದೇವಿ ಸೋಲಿಸಿದ್ದಾರೆ.

ಇದು ಜನರ ಗೆಲುವು-ಸನ್ನು ಕುಮಾರಿ: ತಮ್ಮ ಈ ಸಾಧನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸನ್ನು ಕುಮಾರಿ, ಚುನಾವಣೆಯಲ್ಲಿ ಈ ಬಾರಿ ನಮ್ಮ ಮತದಾರರು ಯುವ ಮತ್ತು ಹೊಸ ಮುಖಕ್ಕೆ ಮನ್ನಣೆ ನೀಡುವ ಮೂಲಕ ನನ್ನನ್ನು ಗೆಲ್ಲಿಸಿದ್ದಾರೆ. ಇದು ನನ್ನ ಒಬ್ಬಳ ವಿಜಯವಲ್ಲ. ಇಡೀ ನರ್ಪತಗಂಜ್​ ನಗರ ಪಂಚಾಯತ್‌ನ ಎಲ್ಲ ಜನರ ಗೆಲುವಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಮುಂದಿನ ತಮ್ಮ ಆದ್ಯತೆಗಳ ಕುರಿತು ಮಾತನಾಡಿದ ಅವರು, ನಗರ ಪಂಚಾಯತ್​ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಸಮಸ್ಯೆಗಳನ್ನು ಜನತೆ ಎದುರಿಸುತ್ತಿದ್ದು, ಅದನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಇನ್ನು, ಸನ್ನು ಕುಮಾರಿ ಅವರು ಇಂದ್ರಾನಂದ ಪಾಸ್ವಾನ್ ಮತ್ತು ಬೇಲಿಬರಿ ಸೇವಿಕಾ ದಂಪತಿಯ ಪುತ್ರಿಯಾಗಿದ್ದು, ತಂದೆ ಇಂದ್ರಾನಂದ ಪಾಸ್ವಾನ್ ಶಿಕ್ಷಕರಾಗಿದ್ದಾರೆ. ನರ್ಪತಗಂಜ್ ನಗರ ಪಂಚಾಯತ್ ಮೇಯರ್​​ ಸ್ಥಾನವನ್ನು ಎಸ್ಸಿ ಮಹಿಳೆಯರಿಗೆ ಮೀಸಲಾದ ನಂತರ ಸನ್ನು ಕುಮಾರಿ ಚುನಾವಣಾ ಅದೃಷ್ಟ ಪರೀಕ್ಷೆ ಎದುರಿಸಲು ನಿರ್ಧರಿಸಿದ್ದರು.

ಹೊಸ ಮುಖಗಳ ಪ್ರಾಬಲ್ಯ: ಗಮನಾರ್ಹ ಅಂಶ ಎಂದರೆ ಬಿಹಾರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಬಾರಿ ಹೊಸ ಮುಖಗಳು ಪ್ರಾಬಲ್ಯ ಹೆಚ್ಚಾಗಿದೆ. ಸನ್ನು ಕುಮಾರಿ ಮಾತ್ರವಲ್ಲದೇ ಇತರ ವಾರ್ಡ್​ಗಳಲ್ಲೂ ಹೊಸ ಮುಖಗಳಿಗೆ ಮತದಾರರು ಮನ್ನಣೆ ನೀಡಿ ಗೆಲ್ಲಿಸಿದ್ದಾರೆ. ಉಷಾದೇವಿ (ವಾರ್ಡ್ 19), ಕೌಶಲ್ ಕುಮಾರ್ ದಾಸ್ (ವಾರ್ಡ್ ನಂ.1), ಬಾಲ್ ಕುಮಾರ್ ಪಾಸ್ವಾನ್ (ವಾರ್ಡ್ ನಂ.2), ರೀಟಾ ದೇವಿ (ವಾರ್ಡ್ ನಂ.3), ಮುಖಿ ಲಾಲ್ ಪಾಸ್ವಾಂಜ್ (ವಾರ್ಡ್ ನಂ.4), ಸಂತೋಷ್ ಕುಮಾರ್ ಯಾದವ್ (ವಾರ್ಡ್ ನಂ.5), ರೇಖಾ ದೇವಿ (ವಾರ್ಡ್ ನಂ.6), ರೋಷನ್ (ವಾರ್ಡ್​ ನಂ. 7) ಹಾಗೂ ಅಮಿತ್ ಕುಮಾರ್ ಪಾಸ್ವಾನ್ (ವಾರ್ಡ್ ನಂ.8) ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸಿರುವೆ: ರಾಹುಲ್​ ಗಾಂಧಿ

ABOUT THE AUTHOR

...view details