ನವದೆಹಲಿ: ದೆಹಲಿಯ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿಡಿದ್ದಾರೆ. ಸುಮಾರು 15 ವರ್ಷಗಳ ಕಾಲ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, ಈ ಬಾರಿ ಆಮ್ ಆದ್ಮಿ ಪಕ್ಷದ ಎದುರು ಸೋತಿದೆ. ಈ ಸೋಲಿನ ನೈತಿಕ ಹೊಣೆ ಹೊತ್ತು ಗುಪ್ತಾ ರಾಜೀನಾಮೆ ನೀಡಿದ್ದಾರೆ.
ಆದೇಶ್ ಗುಪ್ತಾ ಅವರ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ನಿರ್ದೇಶನದ ಮೇರೆಗೆ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಗುಪ್ತಾ ಅವರ ಸ್ಥಾನಕ್ಕೆ ವೀರೇಂದ್ರ ಸಚ್‌ದೇವ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬುಧವಾರದಂದು ಪ್ರಕಟವಾದ ಕಾರ್ಪೋರೇಷನ್ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಸೋತ ನಂತರ ದೆಹಲಿ ಬಿಜೆಪಿಯ ನಾಯಕತ್ವ ಬದಲಾವಣೆಯ ಕೂಗು ಜೋರಾಗಿತ್ತು. ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 134 ಸ್ಥಾನಗಳೊಂದಿಗೆ ಜಯಗಳಿಸಿದ್ದು, ಪ್ರತಿಷ್ಠಿತ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಬಿಜೆಪಿ 104 ಸ್ಥಾನ ಗಳಿಕೆಗೆ ಮಾತ್ರ ಸೀಮಿತವಾಗಿದೆ.