ಜಮ್ಮು ಮತ್ತು ಕಾಶ್ಮೀರ :ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪುರಾಣ ಪ್ರಸಿದ್ಧ ಸೂರ್ಯ ಮಾರ್ತಾಂಡ ದೇವಾಲಯ. ಅನಂತ್ನಾಗ್ ಜಿಲ್ಲಾ ಮುಖ್ಯ ಕೇಂದ್ರದಿಂದ 8 ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯ ಪುರಾಣ ಪ್ರಸಿದ್ಧ ಎನಿಸಿದೆ.
ಈ ದೇವಾಲಯದಲ್ಲಿ ಸೂರ್ಯದೇವನ ಆರಾಧನೆ ನಡೆಯುತ್ತದೆ. ಕ್ರಿಸ್ತ ಪೂರ್ವ 725ರಿಂದ 756ರ ನಡುವೆ ಈ ದೇಗುಲದ ನಿರ್ಮಾಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ದೇವಾಲಯ ದೇಶದ ಅತ್ಯಂತ ಹಳೆಯ ಸೂರ್ಯ ದೇವಾಲಯ ಎಂಬ ಹೆಗ್ಗಳಿಕೆ ಪಡೆದಿದೆ.
ಇದರ ಹೊರತಾಗಿ ಒಡಿಶಾದ ಸೂರ್ಯ ದೇವಾಲಯವು ದೇಶದ 2ನೇ ಅತ್ಯಂತ ಪ್ರಾಚೀನ ಸೂರ್ಯ ದೇವಾಲಯವಾಗಿದೆ. ಕ್ರಿ.ಪೂ 370 ರಿಂದ 500ರ ಅವಧಿಯಲ್ಲಿ ರಾಜ ರಾಣಾ ಆದಿತ್ಯ ಈ ದೇವಾಲಯಕ್ಕೆ ಅಡಿಗಲ್ಲು ಹಾಕಿದ್ದ ಅನ್ನೋದನ್ನು ಇತಿಹಾಸ ಹೇಳುತ್ತದೆ.
ಹಿಮನಗರಿಯಲ್ಲಿ ನೆಲೆಸಿದ್ದಾನೆ ‘ಸೂರ್ಯದೇವ ಈ ಪವಿತ್ರ ದೇವಾಲಯದ ಗೋಡೆಗಳು ಮತ್ತು ಗುಮ್ಮಟದ ಮೇಲೆ ದೇವರು ಮತ್ತು ದೇವತೆಗಳ ಕೆತ್ತನೆಗಳನ್ನು ನಾವಿನ್ನೂ ಕಾಣಬಹುದು. ಸಾವಿರಾರು ವರ್ಷಗಳಷ್ಟು ಹಳೆಯದಾದ ದೇವಾಲಯ ಮಾತ್ರ ಇದೀಗ ಶಿಥಿಲವಾಗುತ್ತಿದೆ. ಹಿಂದೂ ಶಾಸ್ತ್ರಗಳ ಪ್ರಕಾರ, ಮಾರ್ತಾಂಡ ಸೂರ್ಯ ದೇವಾಲಯವು ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರವಾಗಿತ್ತು.
ದೇಗುಲದ ಮಧ್ಯಭಾಗದಲ್ಲಿ ಬೃಹತ್ ಆಕಾರದ ಸೂರ್ಯನ ವಿಗ್ರಹ ನಿರ್ಮಿಸಲಾಗಿದೆ. ದಿನವಿಡೀ ಸೂರ್ಯನ ಕಿರಣಗಳು ಈ ವಿಗ್ರಹದ ಮೇಲೆ ಬೀಳುತ್ತಿತ್ತು. ಈ ದೇವಾಲಯವು ಸದ್ಯ ಭಾರತದ ಪುರಾತತ್ವ ಇಲಾಖೆಯ ಅಡಿಯಲ್ಲಿ ಬಂದರೂ, ಪ್ರಸಿದ್ಧ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಜಾಗ ಪಡೆದಿಲ್ಲ. ಅಷ್ಟೇ ಅಲ್ಲ, ಈ ದೇವಾಲಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಕಾಣಸಿಕ್ಕರೂ ಪ್ರವಾಸಿ ಕೇಂದ್ರವಾಗಿ ಹೆಚ್ಚೇನೂ ಆಕರ್ಷಣೆ ಗಳಿಸೋಕೆ ಸಾಧ್ಯವಾಗಿಲ್ಲ.
ಕಾಶ್ಮೀರದ ಪುರಾತನ ಸಂಸ್ಕೃತಿಯ ರಕ್ಷಣೆಗೆ ಪಣ ತೊಟ್ಟವರಲ್ಲಿ ಅನೇಕರು ಈ ಸೂರ್ಯ ದೇವಾಲಯ ರಕ್ಷಿಸಲು ಮುಂದಾಗಿದ್ದಾರೆ. ಈ ದೇವಾಲಯವನ್ನು ನವೀಕರಿಸಿ ದೇಶ ಹಾಗೂ ರಾಜ್ಯದ ಪ್ರವಾಸಿ ನಕ್ಷೆಯಡಿ ತರಬೇಕು. ಸರ್ಕಾರ ಕೂಡ ಈ ಕುರಿತು ಒತ್ತು ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.