ಇಂಫಾಲ್ (ಮಣಿಪುರ):ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ವಿಚಾರವಾಗಿ ಮಣಿಪುರದಲ್ಲಿ ಬುಡಕಟ್ಟು ಮತ್ತು ಬಹುಸಂಖ್ಯಾತ ಮೈಟೀಸ್ ಸಮುದಾಯದ ನಡುವಿನ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದೆ. ಪರಿಸ್ಥಿತಿ ಹತೋಟಿಗೆ ತರಲು ಕಂಡಲ್ಲಿ ಗುಂಡಿಗೆ ಆದೇಶಿಸಲಾಗಿದೆ. ಮತ್ತೊಂದೆಡೆ, ವಿಶೇಷ ಪಡೆಗಳಾದ ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ರಾಜ್ಯದ ಜನಸಂಖ್ಯೆಯ ಶೇ.53ರಷ್ಟಿರುವ ಬುಡಕಟ್ಟು ಜನಾಂಗದವರಲ್ಲದ ಮೈಟೀಸ್ ಸಮುದಾಯವು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದೆ. ಇದು ಸುಮಾರು ಶೇ.40ರಷ್ಟಿರುವ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದವರನ್ನು ಕೆರಳಿಸಿದೆ. ಅಲ್ಲದೇ, ಇದನ್ನು ವಿರೋಧಿಸಿ ಬುಧವಾರ ಅಖಿಲ ಬುಡಕಟ್ಟು ವಿದ್ಯಾರ್ಥಿ ಸಂಘವು ಹತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ ಹಮ್ಮಿಕೊಂಡಿತ್ತು.
ಈ ವೇಳೆ ಚುರಾಚಂದ್‌ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಘರ್ಷಣೆ ಉಂಟಾಗಿದೆ. ಇದರಿಂದ ಎರಡು ಗುಂಪುಗಳ ನಡುವೆ ದಾಳಿ, ಪ್ರತಿದಾಳಿ ನಡೆದಿದೆ. ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಂಘರ್ಷದಲ್ಲಿ ಅನೇಕ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಯಿತು. ಅಲ್ಲದೇ, ಬೆಂಕಿ ಹಚ್ಚಿ ಸುಟ್ಟುಹಾಕಲಾಗಿದೆ. ಇದು ರಾಜ್ಯಾದ್ಯಂತ ಹಿಂಸಾಚಾರಕ್ಕೂ ಕಾರಣವಾಗಿದೆ.
ಕಂಡಲ್ಲಿ ಗುಂಡು ಆದೇಶ:ರಾಜ್ಯಾದ್ಯಂತ ಹತೋಟಿಗೆ ತರಲು ಮಣಿಪುರ ಪೊಲೀಸರೊಂದಿಗೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ 55 ಸೇನಾ ತುಕಡಿಗಳನ್ನು ಭದ್ರತೆ ಬಳಕೆ ಮಾಡಲಾಗಿದೆ. ಜೊತೆಗೆ ಗಲಭೆಗಳನ್ನು ನಿಭಾಯಿಸಲು ಕ್ಷಿಪ್ರ ಕಾರ್ಯ ಪಡೆಗಳನ್ನೂ ರವಾನಿಸಲಾಗಿದೆ. ಇಲ್ಲಿಯವರೆಗೆ, 9,000 ಜನರನ್ನು ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಪಡೆಗಳು ರಕ್ಷಿಸಿವೆ.