ಇಂಫಾಲ: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಗುಂಪಿನಲ್ಲಿ ಭಾಗಿಯಾಗಿ, ಅವರನ್ನು ಅಮಾನುಷವಾಗಿ ಎಳೆದುಕೊಂಡು ಹೋಗುತ್ತಿದ್ದ ಓರ್ವ ವ್ಯಕ್ತಿ ಸೇರಿದಂತೆ ಗುರುವಾರ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ನಿನ್ನೆ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, "ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದು ಅಮಾನವೀಯ ಘಟನೆ. ಅಪರಾಧಿಗಳು ಮರಣದಂಡನೆಗೆ ಅರ್ಹರು" ಎಂದು ಹೇಳಿದರು. ಇದಾದ ಕೆಲವೇ ಗಂಟೆಗಳ ನಂತರ, ಮತ್ತಿಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮೊದಲು ಬಂಧಿಸಲಾದ ಆರೋಪಿ ಹುಯಿರೆಮ್ ಹೆರೋಡಾಸ್ ಮೈತೆಯ್ (32) ಎಂದು ಗುರುತಿಸಲಾಗಿದೆ. ಇತರೆ ಮೂವರು ವ್ಯಕ್ತಿಗಳ ಕುರಿತಾದ ಮಾಹಿತಿ ತಿಳಿದುಬಂದಿಲ್ಲ.
ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಸಿಎಂ, "ಇದು ಮಾನವೀಯತೆಯ ವಿರುದ್ಧದ ಅಪರಾಧ. ಈ ಘೋರ ಅಪರಾಧದ ಕುರಿತು ನಮ್ಮ ಸರ್ಕಾರ ಮೌನವಾಗಿರುವುದಿಲ್ಲ. ವಿಡಿಯೋ ನೋಡಿದ ಕೂಡಲೇ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಸೈಬರ್ ಕ್ರೈಂ ಇಲಾಖೆಗೆ ಸೂಚಿಸಿದ್ದು, ಅಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ತಿಳಿಸಲಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡಲು ಮತ್ತು ಸಹಜ ಸ್ಥಿತಿಗೆ ಮರಳುವಂತೆ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈ ಸಂಬಂಧ ವಿವಿಧ ಸಮುದಾಯಗಳ ಸಂಘಟನೆಗಳು, ವ್ಯಾಪಾರಿಗಳು, ಧಾರ್ಮಿಕ ಸಂಸ್ಥೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ. ನಾವು ಬಹುಕಾಲದಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. ಸಮುದಾಯಗಳ ನಡುವಿನ ತಪ್ಪು ತಿಳುವಳಿಕೆಯನ್ನು ಮಾತುಕತೆ ಮೂಲಕ ಪರಿಹರಿಸಬಹುದು, ಇದರಿಂದ ಶಾಂತಿಯಿಂದ ಬದುಕಲು ಸಾಧ್ಯ" ಎಂದು ಹೇಳಿದರು.
ಇದನ್ನೂ ಓದಿ :ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆಗೊಳಿಸಿ ಮೆರವಣಿಗೆ, ತೀವ್ರ ಆಕ್ರೋಶ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ