ಇಂಫಾಲ್ (ಮಣಿಪುರ) :ಇಲ್ಲಿನಫಾಲದ ಪೂರ್ವ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿ 12 ಕಂಗ್ಲೇಯಿ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಉಗ್ರರನ್ನು ಬಂಧಿಸಿದ್ದವು. ಆದರೆ, 1,500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳಾ ಬಂಡುಕೋರರ ಗುಂಪು ಸೇನೆ ಟಾರ್ಗೆಟ್ ಮಾಡಿದ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ಮುಂದುವರಿಸದಂತೆ ತಡೆದಿದ್ದಾರೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ 12 ಮಂದಿ ಬಂಧಿತ ಉಗ್ರರನ್ನು ಬಿಡುಗಡೆ ಮಾಡಲಾಯಿತು ಎಂದು ಸೇನೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 24ರಂದು (ನಿನ್ನೆ) ಬೆಳಗ್ಗೆ ಇಂಫಾಲದ ಪೂರ್ವ ಜಿಲ್ಲೆಯ ಇಥಮ್ (ಪೂರ್ವ ಆಂಡ್ರೋದಿಂದ 6 ಕಿ.ಮೀ ದೂರದಲ್ಲಿ) ಗ್ರಾಮದಲ್ಲಿ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಈ ವೇಳೆ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದವು.
ಇದನ್ನೂ ಓದಿ :ಮಣಿಪುರದಲ್ಲಿ 30 ಭಯೋತ್ಪಾದಕರ ಹತ್ಯೆ : ಸಿಎಂ ಎನ್.ಬಿರೇನ್ ಸಿಂಗ್ ಮಾಹಿತಿ
"ಸ್ಥಳೀಯರಿಗೆ ಯಾವುದೇ ಅನಾಹುತ ಆಗಬಾರದೆಂಬ ಕಾರಣಕ್ಕೆ ಕಾರ್ಯಾಚರಣೆ ಪ್ರಾರಂಭಿಸುವ ಮೊದಲು ಈ ಸೂಕ್ಷ್ಮ ಪ್ರದೇಶವನ್ನು ಸುತ್ತುವರಿಯಲಾಯಿತು. ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಸೇರಿದಂತೆ 12 ಮಂದಿ KYKL ಉಗ್ರರನ್ನು ಸೆರೆಹಿಡಿಯಲಾಯಿತು. ಆದರೆ, ಮಹಿಳೆಯರು ಮತ್ತು ಸ್ಥಳೀಯ ನಾಯಕರ ನೇತೃತ್ವದಲ್ಲಿ ಸುಮಾರು 1200- 1500ಕ್ಕೂ ಹೆಚ್ಚು ಜನರ ಗುಂಪು ತಕ್ಷಣವೇ ಸೂಕ್ಷ್ಮ ಪ್ರದೇಶವನ್ನು ಸುತ್ತುವರೆದರು. ಕಾನೂನಿನ ಪ್ರಕಾರ, ಆಕ್ರಮಣಕಾರಿ ಜನಸಮೂಹಕ್ಕೆ ಪದೇ ಪದೇ ಮನವಿ ಮಾಡಿದರೂ ಕಾರ್ಯಾಚರಣೆಯನ್ನು ಮುಂದುವರಿಸದಂತೆ ಭದ್ರತಾ ಪಡೆಗಳಿಗೆ ಅಡ್ಡಿಪಡಿಸಿದರು. ಆ ಬಳಿಕ ವಶಕ್ಕೆ ಪಡೆದ ಎಲ್ಲ 12 ಉಗ್ರರನ್ನು ಸ್ಥಳೀಯ ನಾಯಕನಿಗೆ ಹಸ್ತಾಂತರಿಸಲಾಯಿತು" ಎಂದು ಸೇನೆ ತಿಳಿಸಿದೆ.