ಭುವನೇಶ್ವರ(ಒಡಿಶಾ):ನಾವು ಅಂತಾರಾಜ್ಯ ಕಳ್ಳರ ಬಗ್ಗೆ ತಿಳಿದಿರುತ್ತೇವೆ. ಬೈಕ್, ಕಾರು, ಚಿನ್ನ ಕದಿಯುವ ಖದೀಮರ ಜೊತೆಗೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಡ್ರಗ್ಸ್ ಅಥವಾ ಇನ್ಯಾವುದೇ ವಸ್ತುವನ್ನು ಕಳ್ಳಸಾಗಣೆ ಮಾಡುವ ವಂಚಕರ ಬಗೆಗೂ ಕೇಳಿರುತ್ತೇವೆ. ಆದ್ರೆ ಇಲ್ಲೊಬ್ಬ 'ಅಂತಾರಾಜ್ಯ ಮಹಿಳಾ ವಂಚಕ' ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ವಂಚನೆಯ ಕಥೆ ಹುಬ್ಬೇರಿಸುವಂತಿದೆ.
ಸುಮಾರು 48 ವರ್ಷಗಳ ಅವಧಿಯಲ್ಲಿ 7 ರಾಜ್ಯಗಳ 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿರುವ ಸುಮಾರು 65 ವರ್ಷ ವಯಸ್ಸಿನ ವ್ಯಕ್ತಿಯನ್ನು ಭುವನೇಶ್ವರದಲ್ಲಿ ಪೊಲೀಸರು ಬಂಧಿಸಿದ್ದಾರೆ.
'ಅಂತಾರಾಜ್ಯ ಮಹಿಳಾ ವಂಚಕ'ನ ಬಂಧನ ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯವನಾದ ಈ ವ್ಯಕ್ತಿ, ಮದುವೆಯಾಗಿ ಮಹಿಳೆಯರಿಂದ ಹಣ ಪಡೆದು, ಮೋಸ ಮಾಡಿ ಪರಾರಿಯಾಗುತ್ತಿದ್ದನಂತೆ.
ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ದುಷ್ಕೃತ್ಯ:ಈ ಆರೋಪಿ ಮೊದಲು ವಿವಾಹವಾಗಿದ್ದು 1982ರಲ್ಲಿ, ನಂತರ 2ನೇ ವಿವಾಹ 2020ರಲ್ಲಿ.. ಈ ಎರಡೂ ಮದುವೆಗಳಿಂದ ಈತನಿಗೆ ಐವರು ಮಕ್ಕಳಿದ್ದಾರೆ ಎಂದು ಭುವನೇಶ್ವರ ಉಪ ಪೊಲೀಸ್ ಆಯುಕ್ತ ಉಮಾಶಂಕರ್ ದಾಶ್ ಹೇಳಿದರು.
ಸುಮಾರು 20 ವರ್ಷಗಳ ನಂತರ ಎರಡನೇ ವಿವಾಹವಾಗಿದ್ದ ಈತ, ನಂತರದ 28 ವರ್ಷಗಳಲ್ಲಿ 12 ವಿವಾಹವಾಗಿದ್ದಾನೆ. 2002 ಮತ್ತು 2020ರ ನಡುವೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಮಹಿಳೆಯರ ಸ್ನೇಹ ಬೆಳೆಸಿ ವಿವಾಹವಾಗುತ್ತಿದ್ದ ಈತ, ಅವರನ್ನು ಕೆಲವೇ ದಿನಗಳಲ್ಲಿ ವಂಚಿಸಿ, ಪರಾರಿಯಾಗುತ್ತಿದ್ದ.
ವೈದ್ಯ ಎಂದು ಹೇಳಿಕೊಳ್ಳುತ್ತಿದ್ದ:ತನ್ನನ್ನು ವೈದ್ಯ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದು, ವಕೀಲರು, ಶಿಕ್ಷಕಿ, ವೈದ್ಯರು, ಉನ್ನತ ಶಿಕ್ಷಣ ಪಡೆದವರನ್ನೇ ವಿವಾಹವಾಗಿದ್ದಾನೆ. ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಕೆಲಸ ಮಾಡುವ ಮಹಿಳೆಯನ್ನೂ ಕೂಡಾ ಇದೇ ರೀತಿಯಾಗಿ ವಿವಾಹವಾಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಒಂದು ದಿನ ಮೊದಲು ಫೋನ್ ಕಳ್ಳತನ, ಮರುದಿನ 87 ವರ್ಷದ ವೃದ್ಧೆ ಮೇಲೆ ಅತ್ಯಾಚಾರ
ಈ ಮೊದಲೇ ವಿವಾಹವಾಗಿರುವುದನ್ನು ತಿಳಿಯದ ಮಹಿಳೆಯರು ಆತನನ್ನು ವಿವಾಹವಾಗುತ್ತಿದ್ದರು ಎಂದು ಉಮಾಶಂಕರ್ ದಾಶ್ ವಿವರಿಸಿದರು. ಹೆಚ್ಚಾಗಿ ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ ಆರೋಪಿ, ವಿಚ್ಛೇದಿತ ಮಹಿಳೆಯರನ್ನು ಕೂಡಾ ಮೋಸಗೊಳಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದರು.
ಹೈದರಾಬಾದ್ನಲ್ಲಿ ನಿರುದ್ಯೋಗಿಗಳಿಗೆ ವಂಚನೆ:ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿ ಮಹಿಳೆಯರನ್ನು ಈ ವ್ಯಕ್ತಿ ವಂಚಿಸಿದ್ದಾನೆ. ಅವರ ಮೊದಲ ಇಬ್ಬರು ಪತ್ನಿಯರು ಒಡಿಶಾದರಾಗಿದ್ದಾರೆ. ಕೊನೆಯ ಪತ್ನಿ ದೆಹಲಿಯವರಾಗಿದ್ದು, ಶಿಕ್ಷಕಿಯಾಗಿದ್ದಾರೆ. ಆಕೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯ ಬಳಿಯಿದ್ದ 11 ಎಟಿಎಂ ಕಾರ್ಡ್‌ಗಳು, ನಾಲ್ಕು ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್ ಮತ್ತು ಎರ್ನಾಕುಲಂನಲ್ಲಿ ನಿರುದ್ಯೋಗಿ ಯುವಕರಿಗೆ ವಂಚನೆ ಮಾಡಿದ ಆರೋಪ ಮತ್ತು ಸಾಲ ಮರುಪಾವತಿ ಮಾಡದ ಆರೋಪದಲ್ಲಿ ಎರಡು ಬಾರಿ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.