ಸಂಬಲ್‌ಪುರ (ಒಡಿಶಾ): ಸಾಂಬಾರು ಮಾತ್ರ ತಯಾರಿಸಿ ಅನ್ನ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಇಟ್ಟಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಒಡಿಶಾದ ಸಂಬಲ್‌ಪುರ ಎಂಬಲ್ಲಿ ನಡೆದಿದೆ. ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸನಾತನ ಧಾರುವ ಎಂದು ಗುರುತಿಸಲಾಗಿದ್ದು, ಮೃತರನ್ನು ಪುಷ್ಪಾ ಧಾರುವ(35) ಎಂದು ಗುರುತಿಸಲಾಗಿದೆ.
ಅಂದು ನಡೆದಿದ್ದೇನು?.. ಭಾನುವಾರ ತಡರಾತ್ರಿ ಸನಾತನ ಧಾರುವಾ ತನ್ನ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಕೇವಲ ಸಾಂಬಾರು ಮಾಡಿದ್ದು, ಅನ್ನ ಮಾಡಿರಲಿಲ್ಲ. ಇದರಿಂದ ಕುಪಿತಗೊಂಡ ಸನಾತನ ಪತ್ನಿಯೊಂದಿಗೆ ಕ್ಯಾತೆ ತೆಗೆದಿದ್ದಾನೆ. ಈ ಸಂಬಂಧ ಇಬ್ಬರ ನಡುವಿನ ವಾಗ್ವಾದ ಜಗಳಕ್ಕೆ ತಿರುಗಿ ಅದು ತಾರಕಕ್ಕೇರಿದೆ. ಈ ವೇಳೆ ಸನಾತನ ಇಟ್ಟಿಗೆಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.