ಪಾಲ್ಘರ್ (ಮಹಾರಾಷ್ಟ್ರ): ಸತ್ತಿದ್ದಾನೆ ಎಂದು ಭಾವಿಸಿ ಮಣ್ಣು ಮಾಡಲಾಗಿದ್ದ 60 ವರ್ಷದ ಆಟೋ ಚಾಲಕರೊಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ. ಇದು ವಿಚಿತ್ರ ಎನಿಸಿದರೂ ನಿಜ. ಜೀವಂತವಾಗಿರುವ ಈ ಚಾಲಕ ಮತ್ತು ಈತನ ಕುಟುಂಬಸ್ಥರು ಮಣ್ಣು ಮಾಡಿರುವ ವ್ಯಕ್ತಿ ಇಬ್ಬರೂ ನೋಡಲು ಒಂದೇ ರೀತಿಯಾಗಿದ್ದುದೇ ಇಂಥದ್ದೊಂದು ಘಟನೆಗೆ ಕಾರಣವಾಗಿತ್ತು. ಇಬ್ಬರ ಎತ್ತರ, ಮೈಬಣ್ಣ ಎಲ್ಲವೂ ಹೆಚ್ಚೂ ಕಡಿಮೆ ಒಂದೇ ತೆರನಾಗಿತ್ತಂತೆ. ಹೀಗಾಗಿಯೇ, ಕುಟುಂಬಸ್ಥರು ಮೃತ ವ್ಯಕ್ತಿ ನಮ್ಮವರೇ ಎಂದು ನಂಬಿ ಅಂತ್ಯಸಂಸ್ಕಾರ ನೆರವೇರಿಸಿ ದುಃಖದ ಮಡುವಿನಲ್ಲಿ ಮುಳುಗಿದ್ದರು. ಆದರೆ ಮುಂದೆ ನಡೆದಿದ್ದೇ ಬೇರೆ..!
ಸಂಪೂರ್ಣ ವಿವರ: ಜನವರಿ 29ರಂದು ಮಹಾರಾಷ್ಟ್ರದ ಪಾಲ್ಘರ್ ಮತ್ತು ಬೋಯ್ಸರ್ ನಿಲ್ದಾಣಗಳ ನಡುವೆ ಹಳಿ ದಾಟುತ್ತಿದ್ದಾಗ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆಗ ಪಾಲ್ಘರ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮೃತನ ಗುರುತು ಮತ್ತು ವಾರಸುದಾರರ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೆಲ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಛಾಯಾಚಿತ್ರಗಳನ್ನು ಗಮನಿಸಿದ್ದ ಪಾಲ್ಘರ್ನಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರು ರೈಲ್ವೆ ಪೊಲೀಸರನ್ನು ಸಂಪರ್ಕಿಸಿದ್ದರು. ಮೃತರು ನನ್ನ ಸಹೋದರ ರಫೀಕ್ ಶೇಖ್ ಆಗಿದ್ದು, ಆಟೋ ಚಾಲಕರಾಗಿದ್ದಾರೆ. ಇವರು ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದರು ಎಂದು ಹೇಳಿದ್ದರು.
ಮತ್ತೊಂದೆಡೆ, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಕೇರಳದಲ್ಲಿ ನೆಲೆಸಿದ್ದ 'ಮೃತ' ವ್ಯಕ್ತಿಯ ಪತ್ನಿಯನ್ನು ಸಂಪರ್ಕಿಸಿದ್ದರು. ಆಗ ಕೇರಳದಿಂದ ಪಾಲ್ಘರ್‌ಗೆ ಬಂದಿದ್ದ ಈ ಮಹಿಳೆ, ಶವ ತನ್ನ ಗಂಡನದ್ದೇ ಎಂದು ಗುರುತಿಸಿದ್ದರು. ಹೀಗಾಗಿಯೇ ರೈಲ್ವೆ ಹಳಿಯಲ್ಲಿ ಪತ್ತೆಯಾದ ಮೃತದೇಹವು ರಫೀಕ್ ಶೇಖ್ ಅವರದ್ದೇ ಎಂದು ತಿಳಿದು ಕುಟುಂಬಕ್ಕೆ ಪೊಲೀಸರು ಹಸ್ತಾಂತರಿಸಿದ್ದರು. ಅಲ್ಲಿಂದ ಕಳೆದೆರಡು ದಿನಗಳ ಹಿಂದೆಯಷ್ಟೇ ಕುಟುಂಬಸ್ಥರು ಶವದ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು.