ಗುವಾಹಟಿ (ಅಸ್ಸೋಂ): ಸ್ವತ: ತಂದೆಯೇ ತನ್ನ ಐದು ತಿಂಗಳ ಮಗನ ಕೈಕಾಲುಗಳನ್ನು ಮುರಿದು ಗಾಯಗೊಳಿಸಿರುವ ಅಘಾತಕಾರಿ ಮತ್ತು ಹೃದಯ ವಿದ್ರಾವಕ ಘಟನೆ ಗುವಾಹಟಿ ಸಿಟಿಯ ಕಾಹಿಲಿಪರ್ನ ಪತ್ರಕರ್ತರ ವಸಾಹತು ಕಾಲೊನಿಯಲ್ಲಿ ನಡೆದಿದೆ. ತೀವ್ರ ಗಾಯಗೊಂಡಿದ್ದ ಮಗುವನ್ನು ಪ್ರಸ್ತುತ ಗುವಾಹಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಯಾಕೆ ಚಿತ್ರಹಿಂಸೆ ನೀಡಲಾಗಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ಕ್ರೌರ್ಯ ಮೆರೆದ ಆರೋಪಿ ತಂದೆಯನ್ನು ಅಲ್ಕೇಶ್ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಭಗದತ್ತಾಪುರ ಠಾಣೆಯ ಪೊಲೀಸರು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ಆರೋಪಿ ಗುರುವಾರ ಮಗುವಿನ ಮೇಲೆ ಹಲ್ಲೆ ನಡೆಸಿದ್ದನು. ಮಗು ನೋವು ತಡೆದುಕೊಳ್ಳಲಾಗದೇ, ಗುರುವಾರ ರಾತ್ರಿಯಿಂದ ಶುಕ್ರವಾರದವರೆಗೂ ಅಳಲು ಪ್ರಾರಂಭಿಸಿದೆ. ಮಗು ಇಷ್ಟು ಅಳಲು ಕಾರಣವೇನು, ಮಗುವಿಗೆ ಏನೋ ಆಗಿದೆ ಎಂದು ಅದರ ತಾಯಿ ಪರಿಶೀಲಿಸಿದ್ದಾರೆ. ನಂತರ ಮಗುವನ್ನು ಶುಕ್ರವಾರ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಮಗುವನ್ನೂ ವೈದ್ಯರು ಪರಿಶೀಲಿಸಿದ ಬಳಿಕ ಎರಡೂ ಕಾಲುಗಳು ಮತ್ತು ಒಂದು ಕೈ ಮುರಿತವಾಗಿದೆ ಎಂದು ತಿಳಿಸಿದ್ದಾರೆ. ಆ ಬಳಿಕ ಸ್ಥಳೀಯರು ಮಗುವಿನ ತಂದೆಯನ್ನು ಪ್ರಶ್ನಿಸಿದ್ದಾರೆ. ಮಗುವಿಗೆ ಏನು ಮಾಡಿದ್ದೀಯಾ ಎಂದು ತಮ್ಮದೇ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಅಲ್ಲೇಶ್ ಗೋಸ್ವಾಮಿ ಮಗುವಿನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ನಂತರ ಸ್ಥಳೀಯ ನಿವಾಸಿಗಳು ಅಲ್ಕೇಶ್ ಗೋಸ್ವಾಮಿಯನ್ನು ಪೊಲೀಸರಿಗೆ ಒಪ್ಪಿಸಿ, ತನಿಖೆಗೆ ಒತ್ತಾಯಿಸಿದ್ದಾರೆ.
ಆರೋಪಿ ಅಲ್ಕೇಶ್ ಗೋಸ್ವಾಮಿ ಗುವಾಹಟಿ ಸಿಟಿಯ ಕಾಹಿಲಿಪರ್ ಕಾಲೋನಿಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದಾರೆ. ಈ ರೀತಿ ತನ್ನ ಮಗುವಿನ ಮೇಲೆ ಹಲ್ಲೆ ನಡೆಸಿ, ಹಿಂಸಿಸಲು ಪ್ರೇರೇಪಿಸಿದ್ದು, ಇನ್ನೂ ಮಾಹಿತಿ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಇಡೀ ಘಟನೆಯ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.