ಎರ್ನಾಕುಲಂ, ಕೇರಳ: ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಹಾಕಿದ ಪ್ರಯಾಣಿಕರನ್ನು ಬಂಧಿಸಲಾಗಿದೆ. ಪತ್ತನಂತಿಟ್ಟ ಮೂಲದ ಸಾಬು ವರ್ಗೀಸ್ (55) ಅವರನ್ನು ನೆಡುಂಬಶ್ಶೇರಿ ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ನೆಡುಂಬಶ್ಶೇರಿಯಿಂದ ದುಬೈಗೆ ತೆರಳಲು ಬಂದಿದ್ದರು. ಆರೋಪಿಯನ್ನು ಬಂಧಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ವಿಮಾನ ಹತ್ತುವ ಮುನ್ನ ಭದ್ರತಾ ತಪಾಸಣೆ ವೇಳೆ ಬಾಂಬ್ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸಾಬು ವರ್ಗೀಸ್ ಮೇಲಿದೆ. ವಿಮಾನ ನಿಲ್ದಾಣದಲ್ಲಿ ಮತ್ತೊಬ್ಬ ಪ್ರಯಾಣಿಕನ ಬ್ಯಾಗ್ ತಪಾಸಣೆ ನಡೆಸುತ್ತಿದ್ದಾಗ ಭದ್ರತಾ ಅಧಿಕಾರಿಗೆ ಮುಂದಿನ ಪ್ರಯಾಣಿಕನ ಬ್ಯಾಗ್ನಲ್ಲಿ ಬಾಂಬ್ ಇರುವುದಾಗಿ ತಿಳಿಸಿದ್ದಾನೆ. ತುರ್ತು ಕ್ರಮಗಳ ಭಾಗವಾಗಿ ಪ್ರಯಾಣಿಕರನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲಾಯಿತು.
ನಡೆದಿದ್ದೇನು?:ಗುರುವಾರದ ರಾತ್ರಿ 11.30 ರ ಸುಮಾರಿಗೆ ಟೇಕ್ ಆಫ್ ಆಗಬೇಕಿದ್ದ ದುಬೈಗೆ ತೆರಳುವ ಸ್ಪೈಸ್ ಜೆಟ್ ವಿಮಾನವನ್ನು ಹತ್ತಲು ವರ್ಗೀಸ್ ವಿಮಾನ ನಿಲ್ದಾಣವನ್ನು ತಲುಪಿದ್ದರು. ಭದ್ರತಾ ತಪಾಸಣೆಗೆ ಒಳಪಡುವಂತೆ ಕೇಳಿದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಸರತಿ ಸಾಲಿನಲ್ಲಿ ತನಗಿಂತ ಮುಂದೆ ನಿಂತಿದ್ದ ಮತ್ತೊಬ್ಬ ಪ್ರಯಾಣಿಕನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಸುಳ್ಳು ಹೇಳಿದ್ದಾನೆ. ಆತನ ಮಾತುಗಳನ್ನು ನಂಬಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಶೀಲನೆ ಕೈಗೊಂಡರು.
ಇದಾದ ಬಳಿಕ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಆತನಿಂದ ಬಂದಿರುವ ಬಾಂಬ್ ಬೆದರಿಕೆ ಹುಸಿ ಎಂದು ಅರಿವಾಯಿತು. ಬಳಿಕ ಅಗತ್ಯ ಕ್ರಮಗಳನ್ನು ಕೈಗೊಂಡು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ತಪಾಸಣೆಗೆ ಸಾಕಷ್ಟು ಸಮಯ ಕಾಯಬೇಕಾಗಿದ್ದ ಕಾರಣ ಹುಸಿ ಬಾಂಬ್ ಬೆದರಿಕೆ ಹಾಕಿರುವುದಾಗಿ ಆರೋಪಿ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.