ಚಂಡೀಗಢ(ಪಂಜಾಬ್):ಈಗ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಎಲ್ಲ ಪಕ್ಷಗಳ ಗುರಿ. ಈ ಪಂಚರಾಜ್ಯಗಳ ಚುನಾವಣೆಗೆ ಆ ರಾಜ್ಯದ ಭವಿಷ್ಯವನ್ನು ಮಾತ್ರವಲ್ಲದೇ, ಮುಂದಿನ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಚುಕ್ಕಾಣಿ ಯಾರ ಪಾಲಾಗಲಿದೆ ಎಂಬುದನ್ನೂ ನಿರ್ಧರಿಸುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದ್ದರಿಂದ ಈ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಠ ಪಕ್ಷಗಳಲ್ಲಿದೆ.
ಪಂಜಾಬ್ನಲ್ಲೂ ಇಂಥದ್ದೇ ವಾತಾವರಣವಿದೆ. ಬಹುತೇಕ ಎಲ್ಲ ಪಕ್ಷಗಳು ಜಿದ್ದಾಜಿದ್ದಿನಲ್ಲಿವೆ. ಯಾವುದಾದರೂ ಒಂದು ರಾಜ್ಯದಲ್ಲಿ ಚುನಾವಣೆಯಾದರೆ, ಯಾವುದಾದರೂ ಒಂದು ಪ್ರದೇಶ ಅಥವಾ ಒಂದು ವರ್ಗದ ಅಥವಾ ಒಂದು ಜಾತಿಯ ಪ್ರಾಬಲ್ಯ ಒಮ್ಮೊಮ್ಮೆ ನಿರ್ಣಾಯಕವಾಗುತ್ತದೆ. ಪಂಜಾಬ್‌ನ ಈ ಬಾರಿಯ ಚುನಾವಣೆಯಲ್ಲಿ ಒಂದು ಪ್ರದೇಶ ನಿರ್ಣಾಯಕವಾಗಲಿದೆ ಎಂದು ರಾಜಕೀಯ ತಜ್ಞರು ಹೇಳುವ ಮಾತು. ಆ ಪ್ರದೇಶವೇ ಮಾಳ್ವಾ..
ಮಾಳ್ವಗೆ ಏಕೆ ಅಷ್ಟೊಂದು ಮಹತ್ವ?: ಪಂಜಾಬ್‌ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಳ್ವ ಪ್ರಾಂತ್ಯದಲ್ಲಿ 69 ವಿಧಾನಸಭಾ ಕ್ಷೇತ್ರಗಳಿವೆ. ಮಾಜಾ ಪ್ರಾಂತ್ಯದಲ್ಲಿ 25 ಮತ್ತು ದೋಬಾ ಪ್ರಾಂತ್ಯದಲ್ಲಿ 23 ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಮಾಳ್ವ ವಿಧಾನಸಭಾ ಚುನಾವಣೆಯನ್ನು ಭವಿಷ್ಯ ನಿರ್ಧಾರ ಮಾಡುತ್ತದೆ ಎಂದರೆ ನಿಜಕ್ಕೂ ತಪ್ಪಾಗುವುದಿಲ್ಲ. ಅಂದರೆ ಪಂಜಾಬ್ನಲ್ಲಿ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಒಂದು ಪಕ್ಷಕ್ಕೆ 59 ಕ್ಷೇತ್ರಗಳಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಮಾಳ್ವಾ ಪ್ರಾಂತ್ಯವೊಂದರಲ್ಲೇ 69 ಸ್ಥಾನಗಳಿದ್ದು, ಅದರ ಮಹತ್ವ ನೀವೇ ಅಂದಾಜಿಸಿಕೊಳ್ಳಿ..
2012ರಲ್ಲಿ ಚುನಾವಣೆಯಲ್ಲಿ ಹೀಗಿತ್ತು ಬಲಾಬಲ:ಪಂಜಾಬ್ನಲ್ಲಿ 2012ರಲ್ಲಿ ಎಸ್ಎಡಿ ಅಥವಾ ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರವಿತ್ತು. ಮಾಳ್ವ ಪ್ರಾಂತ್ಯದಲ್ಲಿ ಅಕಾಲಿದಳ 34, ಕಾಂಗ್ರೆಸ್ 31, ಬಿಜೆಪಿ ಎರಡು ಸ್ಥಾನಗಳಲ್ಲಿ ಜಯಶಾಲಿಯಾಗಿತ್ತು. ಮಾಜಾ ಪ್ರಾಂತ್ಯದಲ್ಲಿ ಅಕಾಲಿದಳ 11, ಕಾಂಗ್ರೆಸ್ 9 ಮತ್ತು ಬಿಜೆಪಿ 5 ಮತ್ತು ದೋಬಾ ಪ್ರಾಂತ್ಯದಲ್ಲಿ ಅಕಾಲಿದಳಕ್ಕೆ 11, ಕಾಂಗ್ರೆಸ್ 6 ಮತ್ತು ಬಿಜೆಪಿ 5 ಸ್ಥಾನಗಳನ್ನು ಗಳಿಸಿತ್ತು. ಅಕಾಲಿದಳಕ್ಕೆ ಮಾಳ್ವಾದಲ್ಲಿ ಗೆದ್ದ 34 ಸ್ಥಾನಗಳು ಸರ್ಕಾರ ರಚನೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದವು.
2017 ಚುನಾವಣೆಯಲ್ಲಿ ಹೀಗಿತ್ತು ಬಲಾಬಲ:2017ರಲ್ಲಿ ಕಾಂಗ್ರೆಸ್ ಸರ್ಕಾರ ಪಂಜಾಬ್ನಲ್ಲಿ ಅಧಿಕಾರ ಹಿಡಿದಿತ್ತು. ಹಿಂದಿನ ಬಾರಿ ಅಧಿಕಾರ ಹಿಡಿದಿದ್ದ ಶಿರೋಮಣಿ ಧೂಳೀಪಟವಾಗಿತ್ತು. ಮಾಳ್ವದಲ್ಲಿಕಾಂಗ್ರೆಸ್ 40, ಶಿರೋಮಣಿ ಅಕಾಲಿದಳ 8, ಬಿಜೆಪಿ 1 ಗೆದ್ದಿದ್ದು, ಹೊಸದಾಗಿ ಬಂದಿದ್ದ ಆಮ್ ಆದ್ಮಿ ಪಕ್ಷ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮಾಜಾದಲ್ಲಿ ಕಾಂಗ್ರೆಸ್ 2 ಸ್ಥಾನ, ಬಿಜೆಪಿ 1 ಸ್ಥಾನ, ಶಿರೋಮಣಿ ಅಕಾಲಿದಳ 2 ಸ್ಥಾನಗಳನ್ನು ಗೆದ್ದಿದ್ದು, ಉಳಿದ ಸ್ಥಾನಗಳು ಬೇರೆಯವರ ಪಾಲಾಗಿದ್ದವು.
ದೋಬಾದಲ್ಲಿ ಕಾಂಗ್ರೆಸ್ 15 ಸ್ಥಾನ, ಆಮ್ ಆದ್ಮಿ ಪಕ್ಷ 2 ಸ್ಥಾನ, ಬಿಜೆಪಿ 1 ಸ್ಥಾನ ಮತ್ತು ಶಿರೋಮಣಿ ಅಕಾಲಿದಳ 5 ಸ್ಥಾನಗಳನ್ನು ಜಯಭೇರಿ ಬಾರಿಸಿದ್ದವು. ಈ ಬಾರಿ ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.
ಇನ್ನೂ ಹಿಂದುಳಿದಿದೆ ಮಾಳ್ವ:ರಾಜಕೀಯ ಅಧಿಕಾರದ ಚುಕ್ಕಾಣಿ ವಿಚಾರದಲ್ಲಿ ನಿರ್ಣಾಯಕವಾಗಿರುವ ಮಾಳ್ವದಲ್ಲಿ ದೋಬಾ ಮತ್ತು ಮಾಜಾ ಪ್ರಾಂತ್ಯಗಳಲ್ಲಿ ನಡೆದಿರುವಷ್ಟು ಅಭಿವೃದ್ಧಿ ಕಾರ್ಯಗಳಾಗಿಲ್ಲ. ಮಾಳ್ವಾದಲ್ಲಿ ಸಾಕ್ಷರತೆ ಪ್ರಮಾಣ ಮತ್ತು ಲಿಂಗಾನುಪಾತ ಅತ್ಯಂತ ಕಡಿಮೆ ಇದೆ. ಮಾಳ್ವಾದಲ್ಲಿ ಶೇಕಡಾ 72.3, ದೋಬಾದಲ್ಲಿ ಶೇಕಡಾ 81.48 ಮತ್ತು ಮಾಜಾದಲ್ಲಿ ಶೇಕಡಾ 75.9 ಸಾಕ್ಷರತೆಯಿದೆ. ಅಂದರೆ ಮಾಳ್ವಾದಲ್ಲಿ ವಾಸಿಸುವ ಜನರು ದೋಬಾ ಮತ್ತು ಮಾಜಾಗಿಂತ ಕಡಿಮೆ ವಿದ್ಯಾವಂತರಾಗಿದ್ದಾರೆ.
ಲಿಂಗಾನುಪಾತ ವಿಚಾರಕ್ಕೆ ಬರುವುದಾದರೆ, ಇಲ್ಲಿಯೂ ಕೂಡಾ ಮಹಿಳೆಯರು ಮತ್ತು ಪುರುಷರಲ್ಲಿರುವ ಅನುಪಾತದ ಅಂತರ ಹೆಚ್ಚಾಗಿದೆ. ಇದರ ಜೊತೆಗೆ ರೈತರ ಆತ್ಮಹತ್ಯೆ, ಕ್ಯಾನ್ಸರ್ ರೋಗ, ಕುಡಿಯುವ ನೀರಿನ ಕೊರತೆ, ಮರಳು ಬೆಲೆ ಏರಿಕೆ, ಹತ್ತಿ ಬೆಳೆಗೆ ಕೆಂಪು ಮಿಡತೆ ಹಾವಳಿ, ನಿರುದ್ಯೋಗ, ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಮಾಳ್ವ ಪ್ರದೇಶವನ್ನು ಮತ್ತಷ್ಟು ಬಡತನಕ್ಕೆ ತಳ್ಳಿವೆ.