ನವದೆಹಲಿ:ಬಹುನಿರೀಕ್ಷಿತ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇಂದು (ಬುಧವಾರ) ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ 24 ವರ್ಷಗಳ ನಂತರ ಕಾಂಗ್ರೆಸ್‌ನ ಮೊದಲ ಗಾಂಧಿಯೇತರ ಮುಖ್ಯಸ್ಥರ ಹೆಸರನ್ನು ಘೋಷಿಸಲಾಗಿದೆ. ಚುನಾವಣೆಯ ಕಣದಲ್ಲಿದ್ದ ಶಶಿ ತರೂರ್ ಅವರನ್ನು ಹಿಂದಿಕ್ಕಿದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ಅಧ್ಯಕ್ಷೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ 7897 ಮತಗಳ ಗೆದ್ದರೆ, ಶಶಿ ತರೂರ್ ಸುಮಾರು 1000 ಮತಗಳನ್ನು ಪಡೆದರು. 416 ಮತಗಳು ತಿರಸ್ಕೃತವಾಗಿವೆ ಎಂದು ತಿಳಿದು ಬಂದಿದೆ.
ಸೋಮವಾರ ನಡೆದ ಚುನಾವಣೆಯಲ್ಲಿ 9,915 ಅರ್ಹ ನಾಯಕರಲ್ಲಿ 96 ಪ್ರತಿಶತದಷ್ಟು ಜನರು ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಕರ್ನಾಟಕದ ಕೈ ನಾಯಕರೊಬ್ಬರು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಆಗಿದ್ದಕ್ಕೆ ರಾಜ್ಯದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಇವರ ಆಯ್ಕೆಯಿಂದ ರಾಜ್ಯಕ್ಕೆ ಯಾವ ರೀತಿ ವರದಾನವಾಗಲಿದೆ ಅನ್ನೋದನ್ನು ಕಾದುನೋಡಬೇಕು.
ಕಾಂಗ್ರೆಸ್ ಕಚೇರಿ ಹೊರಗೆ ಸಂಭ್ರಮ:ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ದೆಹಲಿಯ ಎಐಸಿಸಿ ಕಚೇರಿಯ ಹೊರಗೆ ಸಂಭ್ರಮಾಚರಣೆ ನಡೆಯಿತು.
ಇದನ್ನೂ ಓದಿ:ಮುರುಘಾ ಮಠಕ್ಕೆ ಹೊಸ ಆಡಳಿತಾಧಿಕಾರಿ ನೇಮಿಸುವಂತೆ ಆಗ್ರಹ: ಸಿಎಂಗೆ ಪತ್ರ ಬರೆದ ಮಧುಕುಮಾರ್