ಥಾಣೆ(ಮಹಾರಾಷ್ಟ್ರ):ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಮಹಾರಾಷ್ಟ್ರ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ಸ್ಮಶಾನದಲ್ಲಿ ತಮ್ಮ ಜನ್ಮದಿನವನ್ನು ಬಂಧುಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಸ್ಮಶಾನದಲ್ಲೇ ದೊಡ್ಡ ಕೇಕ್ ಕತ್ತರಿಸಿ, ನೂರಾರು ಜನರಿಗೆ ಅಲ್ಲಿಯೇ ಬಿರಿಯಾನಿ ಊಟ ಬಡಿಸಿದ್ದಾರೆ.
ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ಗೌತಮ್ ರತನ್ ಮೋರೆ ಎಂಬುವವರು ಸ್ಮಶಾನದಲ್ಲಿ ಬರ್ತಡೇ ಆಚರಿಸಿಕೊಂಡವರು. 54 ನೇ ವರ್ಷಕ್ಕೆ ಕಾಲಿಟ್ಟ ಗೌತಮ್ ಅವರು ವಿಶೇಷವಾಗಿ ಮತ್ತು ಸಮಾಜಕ್ಕೆ ಸಂದೇಶ ನೀಡುವ ನಿಟ್ಟಿನಲ್ಲಿ ಜನ್ಮದಿನ ಆಚರಣೆಗೆ ಯೋಚಿಸಿದ್ದರು.
ಅದರಂತೆ ಮೂಢನಂಬಿಕೆಗಳು, ದೆವ್ವಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೊಹಾನೆ ಎಂಬ ಸ್ಥಳೀಯ ಸ್ಮಶಾನದಲ್ಲಿ ತಮ್ಮ ಸಂಗಡಿಗರ ಸಮೇತ ಸಂಭ್ರಮಾಚರಣೆ ಮಾಡಿದ್ದಾರೆ. ಮಧ್ಯರಾತ್ರಿ ಕೇಕ್ ಕತ್ತರಿಸಿ, 40 ಮಹಿಳೆಯರು ಸೇರಿ 100 ಕ್ಕೂ ಅಧಿಕ ಅತಿಥಿಗಳಿಗೆ ಬಿರಿಯಾನಿ ಊಟದ ಪಾರ್ಟಿ ನೀಡಿದ್ದಾರೆ.
ಬಳಿಕ ಮಾತನಾಡಿದ ಗೌತಮ್, ಮೂಢನಂಬಿಕೆಗಳು, ಮಾಟಮಂತ್ರ, ದೆವ್ವಗಳ ಅಸ್ತಿತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಖ್ಯಾತ ವಿಚಾರವಾದಿ ದಿವಂಗತ ನರೇಂದ್ರ ದಾಭೋಲ್ಕರ್ ಮತ್ತು ಸಮಾಜ ಸೇವಕಿ ಸಿಂಧುತಾಯಿ ಸಪ್ಕಲ್ ಅವರಿಂದ ಸ್ಫೂರ್ತಿ ಪಡೆದು ಕಾರ್ಯಕ್ರಮ ನಡೆಸಿದೆ ಎಂದು ಹೇಳಿದರು. ಜನ್ಮದಿನದ ಹಿನ್ನೆಲೆಯಲ್ಲಿ ದೊಡ್ಡ ಬ್ಯಾನರ್ ಮತ್ತು ಕೇಕ್ ಕತ್ತರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಓದಿ:ಮರ್ಮಾಂಗ ಕತ್ತರಿಸಿ ಕಾಡಿನಲ್ಲಿ ಎಸೆದ ವ್ಯಕ್ತಿ; ಕಾರಣ..?