ಮುಂಬೈ(ಮಹಾರಾಷ್ಟ್ರ): ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಮತ್ತು ಬಂಡಾಯ ಶಾಸಕರ ನಡುವಿನ ಆರೋಪ ಮತ್ತು ಪ್ರತ್ಯಾರೋಪ ಮಹಾರಾಷ್ಟ್ರದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ವಿಶ್ವಾಸ ಮತದ ಮೊದಲು ಎಲ್ಲ ಬಂಡಾಯ ಶಾಸಕರ ಸಹಿಯನ್ನು ಉಪಸಭಾಪತಿಗಳು ಪರಿಶೀಲನೆ ಮಾಡಬೇಕಿದೆ. ಎಲ್ಲ ಪ್ರಕ್ರಿಯಗಳು ಈಗ ಸಂವಿಧಾನ ಬದ್ದವಾಗಿಯೇ ನಡೆಯಬೇಕಾಗುತ್ತದೆ.
ಸದ್ಯ ನಡೆಯುತ್ತಿರುವ ಬೆಳವಣಿಗಗಳ ಹಿನ್ನೆಲೆಯಲ್ಲಿ ಮಾತನಾಡಿರುವ ಸಂವಿಧಾನ ತಜ್ಞ ಸುಭಾಷ್ ಕಶ್ಯಪ್, ಅವಿಶ್ವಾಸ ನಿರ್ಣಯ ಮಂಡಿಸುವಂತೆ ಸೂಚಿಸುವ ಹಕ್ಕು ರಾಜ್ಯಪಾಲರಿಗೆ ಮಾತ್ರ ಇದೆ. ಇಲ್ಲವೇ ಸಿಎಂ ತಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎನ್ನಿಸಿದಾಗ ಸ್ವಯಂ ಪ್ರೇರಿತವಾಗಿ ರಾಜ್ಯಪಾಲರ ಒಪ್ಪಿಗೆ ಮೇರೆಗೆ ವಿಶ್ವಾಸಮತ ಯಾಚನೆ ಮಾಡುವ ಹಕ್ಕು ಹೊಂದಿದ್ದಾರೆ.
ರಾಜ್ಯಪಾಲರು ಮಾತ್ರ ಸರ್ಕಾರ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸುವ ಅಧಿಕಾರ ಹೊಂದಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನ ಹಿನ್ನೆಲೆ ಸ್ಪೀಕರ್ ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅವರು ಈ ಬಿಕ್ಕಟ್ಟಿನ ಬಗ್ಗೆ ನಿರ್ಧರಿಸುವ ಹಕ್ಕು ಹೊಂದಿರುವುದಿಲ್ಲ. ಪ್ರಸ್ತುತ ಸ್ಪೀಕರ್ ಯಾವುದೇ ಪಾತ್ರವನ್ನು ವಹಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಹಕ್ಕು ರಾಜ್ಯಪಾಲರಿಗೆ ಮಾತ್ರ ಇದೆ ಎಂದು ಕಶ್ಯಪ್ ಹೇಳಿದರು.
ಇನ್ನು ಸ್ಪೀಕರ್ ಯಾರನ್ನಾದರೂ ಅನರ್ಹಗೊಳಿಸಲು ನಿರ್ಧರಿಸಿದರೆ, ಅನರ್ಹಗೊಂಡ ಎಂಎಲ್ಎ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರೆ. ಅಲ್ಲದೇ, ಸ್ವೀಕರ್ ನಿರ್ಣಯದ ವಿರುದ್ಧ ಜಯ ಸಾಧಿಸುವ ಮತ್ತು ಅನರ್ಹತೆಯಿಂದ ಮುಕ್ತನಾಗುವ ನ್ಯಾಯಯುತ ಅವಕಾಶಗಳಿವೆ ಎಂದು ಕಶ್ಯಪ್ ವಿವರಿಸಿದ್ದಾರೆ.
ರಾಜೀನಾಮೆ ನೀಡುವುದು ಅನಿವಾರ್ಯ:ಒಂದು ಸರ್ಕಾರ ಬಹುಮತ ಕಳೆದುಕೊಂಡಾಗ ಮುಖ್ಯಮಂತ್ರಿಗೆ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ. ಇಲ್ಲವೇ ಸದನದಲ್ಲಿ ಬಹುಮತ ಸಾಬೀತು ಮಾಡಬೇಕಾಗುತ್ತದೆ. ಇನ್ನು ಒಂದು ವಿಷಯ ಎಂದರೆ ಸದನದಲ್ಲಿ ಮುಖ್ಯಮಂತ್ರಿ ಬಹುಮತ ಕಳೆದುಕೊಂಡರೆ, ಸ್ಪೀಕರ್ ಕೂಡ ಬಹುಮತ ಕಳೆದುಕೊಂಡಂತಾಗುತ್ತದೆ. ಅಂದರೆ ಅವರು ಯಾರನ್ನಾದರೂ ವಜಾ ಮಾಡುವ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಕಶ್ಯಪ್ ಅಭಿಪ್ರಾಯ ವ್ಯಕ್ತಪಡಿಸಿದರು.