ನಾಗ್ಪುರ, ಮಹಾರಾಷ್ಟ್ರ: ಜಿಲ್ಲೆಯಲ್ಲಿ ಮನಕಲುಕುವ ಘಟನೆಯನ್ನು ನಡೆದಿದೆ. 24 ಗಂಟೆಗಳ ಕಾಲ ನಾಪತ್ತೆಯಾಗಿದ್ದ ಮೂವರು ಮಕ್ಕಳ ಪತ್ತೆಗೆ ಕುಟುಂಬಸ್ಥರು ಹಾಗೂ ಪೊಲೀಸರು ನಡೆಸಿದ ಪ್ರಯತ್ನ ವಿಫಲವಾಗಿದೆ. ಕೊನೆಗೆ ಮನೆಯ ಸಮೀಪದ ಕಾರಿನಲ್ಲಿ ಮಕ್ಕಳು ಶವವಾಗಿ ಪತ್ತೆಯಾಗಿರುವುದು ಕಂಡು ಬಂದಿದೆ. ಈ ಘಟನೆ ಪಚ್ಪಾವಲಿ ಪೊಲೀಸ್ ಠಾಣೆ ವ್ಯಾಪ್ತಿಯ ಫಾರೂಕ್ ನಗರದಲ್ಲಿ ಕಂಡು ಬಂದಿದ್ದು, ಇದರಿಂದಾಗಿ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೃತ ಮಕ್ಕಳನ್ನು ತೌಫಿಕ್ ಫಿರೋಜ್ ಖಾನ್ (4 ವರ್ಷ), ಅಲಿಯಾ ಫಿರೋಜ್ ಖಾನ್ (6 ವರ್ಷ) ಮತ್ತು ಆಫ್ರಿನ್ ಇರ್ಷಾದ್ ಖಾನ್ (6 ವರ್ಷ) ಎಂದು ಗುರುತಿಸಲಾಗಿದೆ. ಈ ಮೂವರು ಮಕ್ಕಳು ಶನಿವಾರದಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾದ 24 ಗಂಟೆಗಳ ಕಾಲ ಪೊಲೀಸರು ಈ ಮಕ್ಕಳ ಪತ್ತೆಗಾಗಿ ಪ್ರಯತ್ನ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಭಾನುವಾರ ಸಂಜೆ ಮೂವರು ಮಕ್ಕಳ ಶವ ಕಾರಿನಲ್ಲಿ ಪತ್ತೆಯಾಗಿರುವುದು ಕಂಡು ಬಂದಿದೆ.
ಪೊಲೀಸ್ ವರದಿ ಪ್ರಕಾರ..ನಾಗ್ಪುರದ ಪಚ್ಪೋಲಿ ಪೊಲೀಸ್ ಠಾಣೆಯಲ್ಲಿ ವಾಸಿಸುತ್ತಿರುವ ತೌಫಿಕ್ ಫಿರೋಜ್ ಖಾನ್ (4), ಅಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಶನಿವಾರ ಸಂಜೆ ಮೂರು ಗಂಟೆಯಿಂದ ನಾಪತ್ತೆಯಾಗಿದ್ದರು. ಟೇಕಾ ನಾಕಾ ಪ್ರದೇಶದ ಫಾರೂಕ್ ನಗರ ಮೈದಾನದಲ್ಲಿ ಶನಿವಾರ ಮಧ್ಯಾಹ್ನದ ಸುಮಾರಿಗೆ ಮಕ್ಕಳು ಆಟವಾಡಲು ಹೋಗಿದ್ದರು. ಅದರ ನಂತರ ಅವರು ನಾಪತ್ತೆಯಾಗಿದ್ದರು. ರಾತ್ರಿಯಾದರೂ ಮಕ್ಕಳು ಹಿಂತಿರುಗದ ಕಾರಣ ಮನೆಯವರು ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ಅವರಿಗಾಗಿ ಶೋಧ ಕೈಗೊಂಡಿದ್ದರು.
ಪೊಲೀಸರು ಮಕ್ಕಳ ಪತ್ತೆಗಾಗಿ ಇಡೀ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಪೊಲೀಸರು ಸಾವಿರಾರು ಸಿಸಿಟಿವಿಗಳನ್ನು ಪರಿಶೀಲಿಸಿದರು. ಆದರೂ ಸಹ ಮಕ್ಕಳ ಸುಳಿವಿನ ಬಗ್ಗೆ ಎಲ್ಲಿಯೂ ಪತ್ತೆಯಾಗಲಿಲ್ಲ. ಶನಿವಾರ ರಾತ್ರಿಯಿಂದ ನೂರಾರು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಮೂವರು ಮಕ್ಕಳ ಹುಡುಕಾಟಕ್ಕಾಗಿ ಕಾರ್ಯ ಕೈಗೊಂಡಿದ್ದರು.