ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪ್ರಸಿದ್ಧ ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇಂದು (ಮಂಗಳವಾರ) ಅನಾವರಣಗೊಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿ 41 ಮರಾಠ ರೈಫಲ್ಸ್‌ನಲ್ಲಿ (ಮರಾಠ ಎಲ್ಐ LI) ಶಿವಾಜಿ ಮಹಾರಾಜರ ಅಶ್ವಾರೋಹಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಸಮಾರಂಭದಲ್ಲಿ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮಂಗಂಟಿವಾರ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಶಿಂಧೆ ಮಾತನಾಡಿ, ಕುಪ್ವಾರ ಜಿಲ್ಲೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
5 ಕೋಟೆಗಳ ಮಣ್ಣು, ನೀರು ಸಂಗ್ರಹ: ಶಿವಾಜಿ ಪ್ರತಿಮೆಯು ಹತ್ತೂವರೆ ಅಡಿ ಎತ್ತರವಿದೆ. ಇದನ್ನು ಅಮ್ಹಿ ಪೋನೆಕರ್ ಫೌಂಡೇಶನ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕ ಸಮಿತಿಯ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಶಿವನೇರಿ, ತೊರ್ನಾ, ರಾಜ್‌ಗಢ, ಪ್ರತಾಪಗಢ ಮತ್ತು ರಾಯಗಢ ಸೇರಿ ಐದು ಕೋಟೆಗಳಿಂದ ಮಣ್ಣು ಮತ್ತು ನೀರು ಸಂಗ್ರಹಿಸಿ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.