ಪ್ರಯಾಗ್‌ರಾಜ್ (ಉತ್ತರ ಪ್ರದೇಶ):ಮಾಜಿ ಶಾಸಕ, ಸಂಸದ ಮತ್ತು ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಶನಿವಾರ ರಾತ್ರಿ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಾಳಿ ಮಾಡಿದ ಮೂವರನ್ನು ಬಂಧಿಸಲಾಗಿದೆ. ಅಲ್ಲದೇ, ಅಹಿತಕರ ಘಟನೆ ತಡೆಗೆ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿನ್ನೆ ರಾತ್ರಿಯಿಂದ ಪೊಲೀಸರು ಜಿಲ್ಲೆಗಳಲ್ಲಿ ಗಸ್ತು ಹೆಚ್ಚಿಸಿದ್ದಾರೆ.
ಆರೋಪಿಗಳನ್ನು ಲವಲೇಶ್ ತಿವಾತಿ, ಸನ್ನಿ ಹಾಗೂ ಅರುಣ್ ಮೌರ್ಯ ಎಂದು ಗುರುತಿಸಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಬಂದ ಆರೋಪಿಗಳು ಹೇಳಿಕೆ ಪಡೆಯುವಾಗ ಪಿಸ್ತೂಲಿನಿಂದ ಅತೀಕ್ ಮತ್ತು ಅಶ್ರಫ್ ತಲೆಗೆ ಗುಂಡಿಕ್ಕಿದ್ದಾರೆ. ತೀವ್ರ ರಕ್ತಸ್ರಾವದಿಂದ ಇಬ್ಬರೂ ನೆಲಕ್ಕುರುಳಿದರು. ಇದಾದ ಬಳಿಕವೂ ಅವರು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಮೂವರು ಆರೋಪಿಗಳನ್ನು ಹಿಡಿದು ಬಂಧಿಸಿದರು. ಘಟನಾ ಸ್ಥಳದಿಂದ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದರು.
ಪತ್ರಕರ್ತರ ವೇಷದಲ್ಲಿ ದಾಳಿ:ಅತೀಕ್ ಅಹ್ಮದ್ ಮತ್ತು ಆತನ ಸಹೋದರನನ್ನು ಆಸ್ಪತ್ರೆಗೆ ಕೈಕೋಳ ಹಾಕಿಕೊಂಡು ಕರೆದೊಯ್ಯುತ್ತಿದ್ದಾಗ ಮಾಧ್ಯಮದವರು ಡಾನ್ಗಳ ಹೇಳಿಕೆ ಪಡೆಯುತ್ತಿದ್ದರು. ಈ ವೇಳೆ ಪತ್ರಕರ್ತರ ವೇಷದಲ್ಲಿದ್ದ ಆರೋಪಿಗಳು ಹಿಂದಿನಿಂದ ಬಂದು ಅತೀಕ್ ತಲೆಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದರು. ಬಳಿಕ ಅಶ್ರಫ್ನಿಗೂ ಗುಂಡು ಹಾರಿಸಲಾಯಿತು. ನೆಲಕ್ಕುರುಳಿ ಬಿದ್ದ ಇಬ್ಬರೂ ಸಾವನ್ನಪ್ಪಿದರು.
ಡಾನ್ಗಳನ್ನು ಗುಂಡಿಕ್ಕಿ ಹತ್ಯೆಗೈದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಅತೀಕ್ ಅಹ್ಮದ್ನ ಪುತ್ರನನ್ನು 2 ದಿನಗಳ ಹಿಂದಷ್ಟೇ ಹತ್ಯೆ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ಅತೀಕ್ನನ್ನು ಕೊಲೆ ಮಾಡಲಾಗಿದೆ. ನಿನ್ನೆಯಷ್ಟೇ ಪುತ್ರನ ಶವಸಂಸ್ಕಾರ ಮಾಡಲಾಗಿತ್ತು.