ಚೆನ್ನೈ (ತಮಿಳುನಾಡು): ತಮಿಳುನಾಡಿನ ಥೇಣಿ ಲೋಕಸಭಾ ಕ್ಷೇತ್ರದ ಎಐಎಡಿಎಂಕೆ ಸಂಸದ ಒಪಿ ರವೀಂದ್ರನಾಥ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಮದ್ರಾಸ್ ಹೈಕೋರ್ಟ್ ಗುರುವಾರ ಆದೇಶಿಸಿದೆ. ಲೋಕಸಭಾ ಕ್ಷೇತ್ರ ತೆರವಾಗಿದೆ ಎಂದು ನ್ಯಾಯಮೂರ್ತಿ ಎಸ್.ಎಸ್.ಸುಂದರ್ ಪ್ರಕಟಿಸಿದರು. ಇದೇ ವೇಳೆ, ರವೀಂದ್ರನಾಥ್ ಅವರಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇವಿಕೆಎಸ್ ಇಳಂಗೋವನ್ ವಿರುದ್ಧ ರವೀಂದ್ರನಾಥ್ ಗೆಲುವು ಸಾಧಿಸಿದ್ದರು. ಥೇಣಿ ಕ್ಷೇತ್ರದ ಮತದಾರ ಪಿ ಮಿಲಾನಿ ಎಂಬುವವರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ತೀರ್ಪು ಹೊರ ಬಂದಿದೆ. ರವೀಂದ್ರನಾಥ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತಮ್ಮ ಚರ ಮತ್ತು ಸ್ಥಿರ ಆಸ್ತಿ ಹಾಗೂ ಅವರ ಕುಟುಂಬ ಸದಸ್ಯರ ವಿವರಗಳು ಸೇರಿದಂತೆ ವಿವಿಧ ವಿಷಯಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.
ಸತ್ಯಾಂಶಗಳು ಮುಚ್ಚಿಟ್ಟಿರುವುದು ಚುನಾವಣೆಯ ಮೇಲೆ ವಸ್ತುವಾಗಿ ಪರಿಣಾಮ ಬೀರಿದೆ. ಆರೋಪಗಳನ್ನು ರುಜುವಾತುಪಡಿಸಲು ವಿವಿಧ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು ಎಂದು ಅರ್ಜಿದಾರ ಮಿಲಾನಿ ಪರ ವಕೀಲ ಅರುಣ್ ತಿಳಿಸಿದ್ದಾರೆ. ಅರ್ಜಿಯ ಕೂಲಂಕುಷವಾಗಿ ಪರಿಶೀಲಿಸಿ ಹಾಗೂ ಸಾಕ್ಷಿಗಳ ವಿಚಾರಣೆ ನಡೆಸಿದ ನಾಯಮೂರ್ತಿಗಳು ರವೀಂದ್ರನಾಥ್ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿದರು ಎಂದು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಸಂಸದ ರವೀಂದ್ರನಾಥ್ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿದರು. ಈ ಮನವಿಯ ಮೇರೆಗೆ ನ್ಯಾಯಮೂರ್ತಿಗಳು ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡಲು ಈ ಆದೇಶದ ಜಾರಿ ಬರುವುದನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರ ಪುತ್ರರಾದ ರವೀಂದ್ರನಾಥ್ ಲೋಕಸಭೆಯಲ್ಲಿ ಎಐಎಡಿಎಂಕೆಯ ಏಕೈಕ ಪ್ರತಿನಿಧಿಯಾಗಿದ್ದಾರೆ. ಪಕ್ಷದಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ ಹಾಗೂ ಪನ್ನೀರಸೆಲ್ವಂ ನಡುವೆ ಬಿಕ್ಕಟ್ಟು ಏರ್ಪಟ್ಟಿದೆ. ಕಳೆದ ವರ್ಷ ಜುಲೈನಲ್ಲಿ ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ತಕ್ಷಣ ಪಳನಿಸ್ವಾಮಿ ತಮ್ಮ ಪ್ರತಿಸ್ಪರ್ಧಿ ಪನ್ನೀರಸೆಲ್ವಂ ಮತ್ತು ರವೀಂದ್ರನಾಥ್ ಸೇರಿದಂತೆ ಇತರರನ್ನು ಉಚ್ಚಾಟಿಸಿದ್ದರು.
ರವೀಂದ್ರನಾಥ್ ಇನ್ಮುಂದೆ ಎಐಎಡಿಎಂಕೆಯಲ್ಲಿಲ್ಲ. ಅವರನ್ನು ಪಕ್ಷವನ್ನು ಪ್ರತಿನಿಧಿಸುವ ಸಂಸದ ಎಂದು ಪರಿಗಣಿಸಬಾರದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪಳನಿಸ್ವಾಮಿ ಪತ್ರವನ್ನೂ ಬರೆದಿದ್ದರು. 2019ರ ಚುನಾವಣೆಯಲ್ಲಿ ರವೀಂದ್ರನಾಥ್ ವಿರುದ್ಧ ಸೋತಿದ್ದ ಕಾಂಗ್ರೆಸ್ನ ಇವಿಕೆಎಸ್ ಇಳಂಗೋವನ್ ಈಗ ಈರೋಡ್ ಪೂರ್ವ ಕ್ಷೇತ್ರ ಶಾಸಕರಾಗಿದ್ದಾರೆ. ಅವರ ಪುತ್ರ ತಿರುಮಗನ್ ಎವೆರಾ ಅವರ ನಿಧನದಿಂದ ತೆರವಾದ ಈರೋಡ್ ಪೂರ್ವ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಇಳಂಗೋವನ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಪ್ರಕರಣ: ಹೈಕೋರ್ಟ್‌ನಿಂದ ವಿಭಿನ್ನ ತೀರ್ಪು.. ತ್ರಿಸದಸ್ಯ ಪೀಠ ರಚಿಸಲು ಸುಪ್ರೀಂ ಸೂಚನೆ