ಕರ್ನಾಟಕ

karnataka

ETV Bharat / bharat

ಲೋಕ್ ಅದಾಲತ್ ವ್ಯವಸ್ಥೆ ಇನ್ನಷ್ಟು ಬಲಪಡಿಸಬೇಕಿದೆ!

ಲೋಕ್​ ಅದಾಲತ್ ವ್ಯವಸ್ಥೆ ಎಲ್ಲೆಡೆ ಪರಿಣಾಮಕಾರಿಯಾಗಿರುವುದು ಈಗ ರುಜುವಾತಾಗಿದೆ. ಈ ಹಿನ್ನೆಲೆಯಲ್ಲಿ ಜನರ ಮನೆ ಬಾಗಿಲ ಸಮೀಪ ತ್ವರಿತವಾಗಿ ನ್ಯಾಯ ತಲುಪಿಸಲು ಲೋಕ್​ ಅದಾಲತ್ ವ್ಯವಸ್ಥೆ ಮತ್ತಷ್ಟು ಬಲಪಡಿಸಬೇಕು. ಇದಕ್ಕೆ ಪೂರಕವಾದ ಕ್ರಮಗಳನ್ನು ಸಂಬಂಧಪಟ್ಟವರು ತೆಗೆದುಕೊಳ್ಳಬೇಕಿದೆ.

Lok Adalat deserves to be strengthened further
ಲೋಕ್ ಅದಾಲತ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಿದೆ

By

Published : Apr 14, 2021, 2:45 PM IST

ದೇಶದ ಸಂವಿಧಾನದ 39ಎ ವಿಧಿಯು ನಮ್ಮಲ್ಲಿನ ಎಲ್ಲಾ ಬಡವರಿಗೆ ಉಚಿತ ಕಾನೂನು ನೆರವನ್ನು ಪ್ರಸ್ತಾಪಿಸುತ್ತದೆ. ಅದು ಸಮಾಜದ ಎಲ್ಲ ದುರ್ಬಲ ವರ್ಗಗಳು ಮತ್ತು ಎಲ್ಲರಿಗೂ ನ್ಯಾಯವನ್ನು ಖಾತ್ರಿಪಡಿಸುತ್ತದೆ. ದೇಶ ಸ್ವಾತಂತ್ರ್ಯ ಪಡೆದ ನಾಲ್ಕು ದಶಕಗಳ ಬಳಿಕ 1987ರಲ್ಲಿ ಭಾರತ ಸರ್ಕಾರ ಈ ನಿಟ್ಟಿನಲ್ಲಿ ಒಂದು ಮಹತ್ವದ ಕಾಯಿದೆಯೊಂದನ್ನು ಜಾರಿಗೆ ತಂದಿತು. ಸಂವಿಧಾನದ ಆಶೋತ್ತರಗಳನ್ನು ಈಡೇರಿಸಲು, ಕಾನೂನು ಸೇವೆಗಳನ್ನು ಎಲ್ಲರಿಗೂ ವಿಸ್ತರಿಸುವ ಸಾಂವಿಧಾನಿಕ ಉದ್ದೇಶ ಈಡೇರಿಸುವ ಸಂಬಂಧ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಈ ಕಾಯ್ದೆಗೆ 1987ರಲ್ಲಿ ಸಂಸತ್ತು ಒಪ್ಪಿಗೆ ಸೂಚಿಸಿತು. ಆದರೆ, ಈ ಕಾಯ್ದೆಯು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದದ್ದು 1995ರಲ್ಲಿ. ಈ ಕಾಯ್ದೆ ಜಾರಿಗೆ ರಾಷ್ಟ್ರೀಯ ಪ್ರಾಧಿಕಾರವೊಂದನ್ನು ಸ್ಥಾಪಿಸಲಾಯಿತು. ಈ ಕಾಯ್ದೆಯ ಪ್ರಕಾರ, ಸಾಮಾನ್ಯ ಜನರಿಗೆ ತ್ವರಿತ ನ್ಯಾಯ ಒದಗಿಸುವ ಉದ್ದೇಶದಿಂದ ಲೋಕ ಅದಾಲತ್‌ಗಳು ಮತ್ತು ಇತರ ಪರ್ಯಾಯ ವಿವಾದ ಪರಿಹಾರದ ಕಾರ್ಯಕ್ರಮಗಳು ಜಾರಿಗೆ ಬಂದವು. ಈ ಕಾಯ್ದೆಯ ಅನುಸಾರ ತೆಲಂಗಾಣದಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಲೋಕ ಅದಾಲತ್ ಕಳೆದ ಶನಿವಾರ ಮುಕ್ತಾಯಗೊಂಡಿದೆ. ಈ ಲೋಕ್​ ಅದಾಲತ್ ನಲ್ಲಿ 59,000 ದಷ್ಟು ಪ್ರಕರಣಗಳು ಇತ್ಯರ್ಥಗೊಂಡವು. ಈ ಲೋಕ ಅದಾಲತ್​ನಲ್ಲಿ ನ್ಯಾಯ ಅಪೇಕ್ಷಿಸಿದವರಿಗೆ ನಾನಾ ಪ್ರಕರಣಗಳಲ್ಲಿ ಒಟ್ಟಾರೆಯಾಗಿ, 49 ಕೋಟಿ ರೂಪಾಯಿಗಳಷ್ಟು ಪರಿಹಾರ ವಿತರಿಸಲಾಗಿದೆ. ಈ ಪರಿಹಾರ ವಿತರಣೆಯೊಂದಿಗೆ ಈ ಎಲ್ಲ ಪ್ರಕರಣಗಳನ್ನು ಪರಿಹರಿಸಲಾಗಿದೆ. ಒಟ್ಟಾರೆಯಾಗಿ, ಸುಲಭವಾಗಿ ಈ ಎಲ್ಲ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸಲಾಯಿತು.

ಇನ್ನು, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಸೇರಿದಂತೆ 16 ರಾಜ್ಯಗಳು ಕೋವಿಡ್ ಕಾರಣಕ್ಕಾಗಿ ಲೋಕ ಅದಾಲತ್ ಮುಂದೂಡಿವೆ. ಕರ್ನಾಟಕದಲ್ಲಿ ಈ ಲೋಕ್ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಲಾಗುತ್ತಿದೆ. ಮಾರ್ಚ್ ಕೊನೆಯ ವಾರ ನಡೆದ ಲೋಕ್​ ಅದಾಲತ್​ನಲ್ಲಿ 3.3 ಲಕ್ಷ ಪ್ರಕರಣಗಳನ್ನು ಈ ಲೋಕ ಅದಾಲತ್​ಗಳಲ್ಲಿ ಪರಿಹರಿಸಲಾಗಿದೆ. 1000 ಕೋಟಿ ರೂಪಾಯಿ ಪರಿಹಾರವನ್ನು ಈ ಅದಾಲತ್​ಗಳಲ್ಲಿ ವಿತರಿಸಲಾಗಿದೆ. ಕಳೆದ ವರ್ಷ, ಕೋವಿಡ್ ಸಾಂಕ್ರಾಮಿಕ ರೋಗ ದೇಶದೆಲ್ಲೆಡೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಈ ಅದಾಲತ್​ಗಳಲ್ಲಿ 12.6 ಲಕ್ಷ ವಿವಾದಗಳನ್ನು ನ್ಯಾಯಾಲಯದ ಹೊರಗೆ ಪರಿಹರಿಸಲಾಗಿದೆ. ಜೊತೆಗೆ 12.8 ಲಕ್ಷ ಇತರ ಪ್ರಕರಣಗಳನ್ನು ಪರಿಹಾರದೊಂದಿಗೆ ಪರಿಹರಿಸಲಾಗಿದೆ. ಈ ಪ್ರಕರಣಗಲ್ಲಿ ಒಟ್ಟಾರೆ ಒಂದು ಸಾವಿರ ಕೋಟಿ ಪರಿಹಾರವನ್ನು ನೊಂದವರಿಗೆ ನೀಡಲಾಗಿದೆ. ಒಟ್ಟಾರೆಯಾಗಿ ಕೋವಿಡ್ ನಡುವೆಯೂ ಈ ಲೋಕ ಅದಾಲತ್​​​ಗಳು ಪರಿಣಾಮಕಾರಿ ಎಂದು ಶ್ರುತಪಟ್ಟಿವೆ.

ಈ ಎಲ್ಲ ಕಾರಣಕ್ಕಾಗಿ ದೇಶದಲ್ಲಿ ಬಡವರಿಗೆ ತ್ವರಿತವಾಗಿ ನ್ಯಾಯ ದೊರಕಲು ಈ ಲೋಕ್ ಅದಾಲತ್ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ. ದೇಶದ 28 ರಾಜ್ಯಗಳ ರಾಜ್ಯಮಟ್ಟದ ಕಾನೂನು ಸೇವೆಗಳ ಪ್ರಾಧಿಕಾರಗಳು ಈಗ ಇ-ಲೋಕ್ ಅದಾಲತ್ ವ್ಯವಸ್ಥೆ ಹೊಂದಿವೆ. ಈ ಇ-ಲೋಕ್ ಅದಾಲತ್ ವ್ಯವಸ್ಥೆಯಲ್ಲಿ ಆಡಿಯೊ ಹಾಗೂ ದೃಶ್ಯ ಮಾಧ್ಯಮದ ಸಹಾಯದಿಂದ ಅದಾಲತ್ ಮತ್ತು ಹೀಗೆ ತ್ವರಿತ ನ್ಯಾಯ ವಿತರಣೆ ನಡೆಸಲಾಗುತ್ತದೆ. ಇದು ಜನ ಸಾಮಾನ್ಯರಿಗೆ ತುಂಬಾ ಅನುಕೂಲಕರವಾಗಿ ಪರಿಣಮಿಸಿದೆ. ಏಕೆಂದರೆ ಅವರಿಗೆ ನ್ಯಾಯ ತ್ವರಿತವಾಗಿ ಸಿಗುತ್ತಿದೆ. ಇನ್ನು, ನಮ್ಮ ಕಾನೂನು ವ್ಯವಸ್ಥೆಯು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅದಕ್ಕೆ ತ್ವರಿತವಾಗಿ ಹೊಂದಿಕೊಳ್ಳುತ್ತಿದೆ ಎಂಬುದಕ್ಕೆ ಇದು ಉದಾಹರಣೆ. ನಮ್ಮಲ್ಲಿನ ಲೋಕ ಅದಾಲತ್ ಪದ್ಧತಿಯಲ್ಲಿ ಕಂಡು ಬರುವಷ್ಟು ಸಮಾನತೆಯನ್ನು ಜಗತ್ತಿನ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಹೇಳುವುದಾದರೆ, ಈ ವರೆಗಿನ ಲೋಕ್ ಅದಾಲತ್ ಗಳಲ್ಲಿ ಸಿಕ್ಕಿರುವ ಅನುಭವಗಳನ್ನು ಬಳಸಿಕೊಂಡು ಅದನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿಸಲು ಶ್ರಮಿಸಬೇಕಿದೆ.

ನಮ್ಮ ನ್ಯಾಯಾಂಗ ವ್ಯವಸ್ಥೆಯು ಕೋಟಿಗಟ್ಟಲೆ ದಾವೆಗಳಿಂದ ಒತ್ತಡಕ್ಕೊಳಗಾಗಿದೆ. ದಶಕಗಳಿಂದ ಈ ಸಮಸ್ಯೆ ಇದೆ. ಇದು ಕಕ್ಷಿದಾರರಿಗೂ ಯಾವುದೇ ಹಿತ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆ ಮಾಡುವುದು ಹೇಗೆ ಎಂಬುದರ ಕುರಿತಂತೆ ನಮ್ಮಲ್ಲಿ ಐಡಿಯಾಗಳಿಗೆ ಏನು ಕೊರತೆ ಇಲ್ಲ. ಆದರೆ, ಅವುಗಳ ಅನುಷ್ಠಾನವೇ ದೊಡ್ಡ ಸವಾಲು.
ನಮ್ಮ ದೇಶದಲ್ಲಿ ದೇಶಾದ್ಯಂತದ ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳಲ್ಲಿನ 17 ಪ್ರತಿಶತ ಪ್ರಕರಣಗಳು ಮೂರರಿಂದ ಐದು ವರ್ಷಗಳ ಹಿಂದಿನವು. ಉನ್ನತ ನ್ಯಾಯಾಲಯಗಳಲ್ಲಿ, 20.4 ಪ್ರತಿಶತ ಪ್ರಕರಣಗಳು ಐದರಿಂದ ಹತ್ತು ವರ್ಷಗಳಿಂದ ಬಾಕಿ ಉಳಿದಿವೆ ಮತ್ತು 17 ಪ್ರತಿಶತ ಪ್ರಕರಣಗಳು ಇಪ್ಪತ್ತು ವರ್ಷಗಳಿಂದ ಬಾಕಿ ಉಳಿದಿವೆ.

ದತ್ತಾಂಶಗಳ ಪ್ರಕಾರ, 50 ಪ್ರತಿಶತಕ್ಕೂ ಹೆಚ್ಚು ಪ್ರಕರಣಗಳಲ್ಲಿ ದಾವೆ ಹೂಡುವವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು. ಈ ವ್ಯವಸ್ಥೆಗೆ ಬೇರೆ ಪರ್ಯಾಯವಿಲ್ಲ. ಸುಮಾರು ಮೂರು ದಶಕಗಳ ಹಿಂದೆ ಸೂಕ್ತ ಕಾನೂನು ಕ್ರಮಗಳ ಮೂಲಕ ವೈಜ್ಞಾನಿಕ ಪ್ರಕರಣ ವಿಲೇವಾರಿ ಸೂತ್ರದ ಮೂಲಕ ಬಾಕಿ ಇರುವಿಕೆಯನ್ನು ಕಡಿಮೆ ಮಾಡಲು ಕಾನೂನು ಆಯೋಗ ಸೂಚಿಸಿತ್ತು. ಇದೆ ಅಭಿಪ್ರಾಯವನ್ನು ಹಿಂದೊಮ್ಮೆ ಸುಪ್ರೀಂಕೋರ್ಟ್ ಕೂಡ ಹೇಳಿತ್ತು. ಸರ್ಕಾರಗಳು ತಮ್ಮ ನಾಗರಿಕರ ಜೊತೆಗೆ ಹೊಂದಾಣಿಕೆ ಮನೋಭಾವ ಹೊಂದಿರಬೇಕೇ ಹೊರತು ಮುಖಾಮುಖಿಯಾಗಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಗಳು ದಾವೆ ಹೂಡುವ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ. ಲೋಕ ಅದಾಲತ್‌ಗೆ ಬರುವ ಹೆಚ್ಚಿನ ಪ್ರಕರಣಗಳು ಭೂಸ್ವಾಧೀನ, ಕಾರ್ಮಿಕ ವಿವಾದಗಳು, ಪಿಂಚಣಿ, ಗ್ರಾಹಕರ ಕುಂದು ಕೊರತೆಗಳು, ದೂರವಾಣಿ, ಪುರಸಭೆಯ ಸೇವೆಗಳು ಮತ್ತು ವಿದ್ಯುತ್‌ಗೆ ಸಂಬಂಧಿಸಿದ ವಿಷಯಗಳ ಬಗೆಗಾಗಿದೆ. ಸುಪ್ರೀಂಕೋರ್ಟ್ ಸೂಚಿಸಿದಂತೆ ಸರ್ಕಾರ, ಅಧಿಕಾರಿಗಳು ಅಂತಹ ಸಂದರ್ಭಗಳಲ್ಲಿ ರಾಜಿ ಮಾಡಿಕೊಳ್ಳುವ ವಿಧಾನವನ್ನು ಅನುಸರಿಸಬೇಕು. ಇಂತಹ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿದೆ.

ಇನ್ನು, ಲೋಕ್​ ಅದಾಲತ್​ಗಳನ್ನು ಜನರ ನ್ಯಾಯಾಲಯಗಳಂತೆ, ಅವರ ಅಪೇಕ್ಷೆಗೆ ಅನುಗುಣವಾಗಿ ನಡೆಸಬೇಕು. ಅವುಗಳು, ಅವರಿಗೆ ಕೊನೆಯಲ್ಲಿ ನ್ಯಾಯ ದೊರಕಿತು ಎನ್ನುವ ಮನೋಭಾವನೆ ಮೂಡಿಸಬೇಕು. 2011ರಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ದೇಶದ ಪ್ರತಿ ಒಂದು ಹಳ್ಳಿಯಲ್ಲಿ ಅಥವಾ ಸಣ್ಣ ಹಳ್ಳಿಗಳ ಒಂದು ಕ್ಲಸ್ಟರ್​ನಲ್ಲಿ ಕನಿಷ್ಠ ಒಂದು ಕಾನೂನು ಚಿಕಿತ್ಸಾಲಯ ಸ್ಥಾಪಿಸುವ ಅಗತ್ಯವನ್ನು ಘೋಷಿಸಿತು. ಎಲ್ಲರಿಗೂ ಕಾನೂನು ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಹಾಗೂ ಎಲ್ಲರಿಗೂ ನ್ಯಾಯ ತಲುಪುವಂತಾಗಲು ಇಂತಹ ಒಂದು ವ್ಯವಸ್ಥೆಯ ಅಗತ್ಯ ಇದೆ ಎಂದು ಅದು ಪ್ರತಿಪಾದಿಸಿತು. ದೇಶದಲ್ಲಿ ಸುಮಾರು 6 ಲಕ್ಷ ಹಳ್ಳಿಗಳಿವೆ. ಈಗ 14,000 ಇಂತಹ ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾನೂನು ಚಿಕಿತ್ಸಾಲಯಗಳನ್ನು ಇನ್ನಷ್ಟು ಪ್ರದೇಶಗಲ್ಲಿ ಸ್ಥಾಪಿಸಿ, ಜನರಿಗೆ ಅನುಕೂಲ ಕಲ್ಪಿಸಬೇಕಿದೆ. ಲೋಕ್​ ಅದಾಲತ್ ವ್ಯವಸ್ಥೆ ಎಲ್ಲೆಡೆ ಪರಿಣಾಮಕಾರಿಯಾಗಿರುವುದು ಈಗ ರುಜುವಾತಾಗಿದೆ. ಈ ಹಿನ್ನಲೆಯಲ್ಲಿ ಜನರ ಮನೆ ಬಾಗಿಲ ಸಮೀಪ ತ್ವರಿತವಾಗಿ ನ್ಯಾಯ ತಲುಪಿಸಲು ಲೋಕ್​ ಅದಾಲತ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಇದಕ್ಕೆ ಪೂರಕವಾದ ಕ್ರಮಗಳನ್ನು ಸಂಬಂಧಪಟ್ಟವರು ತೆಗೆದುಕೊಳ್ಳಬೇಕಿದೆ.

ABOUT THE AUTHOR

...view details