ಕರ್ನಾಟಕ

karnataka

ETV Bharat / bharat

ಸಿಡಿಲಿನ ಅಬ್ಬರ.. ನಾಲ್ಕು ರಾಜ್ಯಗಳಲ್ಲಿ 24 ಮಂದಿ ಸಾವು, ಹಲವರಿಗೆ ಗಾಯ - ಒಡಿಶಾ

ದೇಶದ ವಿವಿಧೆಡೆ ಮಳೆ ಆರ್ಭಟ ಮುಂದುವರೆದಿದ್ದು, ಕೆಲ ರಾಜ್ಯಗಳಲ್ಲಿ ಪ್ರವಾಹ, ಸಿಡಿಲು ಬಡಿತ ಅವಘಡಗಳು ಸಂಭವಿಸಿ ಜನ ಪ್ರಾಣ ಕಳೆದುಕೊಂಡಿದ್ದಾರೆ. ಶನಿವಾರ ಒಂದೇ ದಿನ ದೇಶಾದ್ಯಂತ 24 ಜನ ಸಿಡಿಲು ಬಡಿತಕ್ಕೆ ಬಲಿಯಾಗಿದ್ದಾರೆ.

Lightning strikes kill 24 across 4 states; many injured
ಸಿಡಿಲು ಬಡಿದು ಅವಘಡ

By

Published : Aug 8, 2021, 9:14 AM IST

ಬಂಕಾ (ಬಿಹಾರ) : ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಶನಿವಾರ ಸಿಡಿಲು ಬಡಿದು ಸುಮಾರು 24 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ದೇಶದಲ್ಲಿ ಸಿಡಿಲು ಬಡಿದು ಮೃತಪಟ್ಟವರ ಸಂಖ್ಯೆ ಹೆಚ್ಚಳವಾಗಿದೆ ಎಂದು ರಾಜ್ಯ ಖಾತೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಘಟನೆಯ ಕುರಿತು ಹೇಳಿದ್ದಾರೆ.

ಬಿಹಾರದ ಬಂಕಾ ಜಿಲ್ಲೆಯಲ್ಲಿ ಶನಿವಾರ ಸಿಡಿಲು ಬಡಿದು 7 ಜನರು ಮೃತಪಟ್ಟಿರುವುದಾಗಿ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಮಾಹಿತಿ ನೀಡಿದ್ದಾರೆ. "ಬಂಕಾ ಜಿಲ್ಲೆಯಲ್ಲಿ ಸಿಡಿಲು ಬಡಿದು 7 ಜನ ಮೃತಪಟ್ಟಿರುವುದು ದುಃಖದ ವಿಷಯ. ಈ ಕಷ್ಟದ ಸಮಯದಲ್ಲಿ ಬಿಹಾರ ಸರ್ಕಾರವು ಸಂತ್ರಸ್ತರ ಕುಟುಂಬದೊಂದಿಗೆ ಇದೆ. ಘಟನೆಯಲ್ಲಿ ಮೃತಪಟ್ಟವರಿಗೆ ನಾನು ಸಂತಾಪ ಸೂಚಿಸುತ್ತೇನೆ. ಗಾಯಗೊಂಡವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪಾಂಡೆ ಟ್ವೀಟ್ ಮಾಡಿದ್ದಾರೆ.

ಒಡಿಶಾದಲ್ಲಿ ಐವರು ಸಾವು

ಶನಿವಾರ ಒಡಿಶಾದ ಮೂರು ಜಿಲ್ಲೆಗಳಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರು ಸಿಡಿಲು ಬಡಿದು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಯೂರ್ಭಂಜ್, ಭದ್ರಕ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ಭತ್ತದ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಡುವೆ, ಬಾಲಸೋರ್ ಜಿಲ್ಲೆಯ ಕಸಬಜಯಪುರ ಗ್ರಾಮದ ಭತ್ತದ ಗದ್ದೆಯಲ್ಲಿ ಏತ ನೀರಾವರಿಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಸ್ಥಳೀಯರು ಅಡ್ಡಿಪಡಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಗಾಳದಲ್ಲಿ ನಾಲ್ವರು ಸಾವು, 7 ಮಂದಿಗೆ ಗಾಯ

ಪಶ್ಚಿಮ ಬಂಗಾಳದ ಎರಡು ಜಿಲ್ಲೆಗಳಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಶನಿವಾರ ಭಾರಿ ಮಳೆ ಹಿನ್ನೆಲೆ ರಾಜ್ಯದ ದಕ್ಷಿಣ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹಕ್ಕೆ ಸಿಲುಕಿ ಪುರ್ಬಾ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ 20ರ ಆಸುಪಾಸಿನ ಇಬ್ಬರು ಮೃತಪಟ್ಟಿದ್ದಾರೆ. ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸಿಡಿಲು ಬಡಿದು ಕೊನೆಯುಸಿರೆಳೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಏಳು ಜನರು ಗಾಯಗೊಂಡಿದ್ದಾರೆ. ಇವರೆಲ್ಲರೂ ಕೃಷಿ ಕೆಲಸಗಳಲ್ಲಿ ತೊಡಗಿದ್ದಾಗ ಅವಘಢ ಸಂಭವಿಸಿದೆ. ದಕ್ಷಿಣ ಬಂಗಾಳದ ಏಳು ಜಿಲ್ಲೆಗಳಾದ, ಪುರ್ಬಾ ಮತ್ತು ಪಶ್ಚಿಮ ಮೇದಿನೀಪುರ, ಹೌರಾ, ದಕ್ಷಿಣ 24 ಪರಗಣ, ಬಿರ್ಭುಮ್ ಮತ್ತು ಪಶ್ಚಿಮ ಬರ್ಧಮಾನ್​ನಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಶನಿವಾರ ಬೆಳಗ್ಗೆ ಮಳೆ ಕೊಂಚ ಕಡಿಮೆಯಾಗಿತ್ತು, ಆದರೆ, ಸಂಜೆ ವೇಳೆಗೆ ಮತ್ತೆ ಭಾರಿ ಮಳೆ ಆರಂಭವಾಗಿದೆ. ಇದು ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಮತ್ತು ಎಲ್ಲಾ ಜನರು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುತ್ತಿದ್ದೇವೆ. ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಅಗತ್ಯವಿರುವಷ್ಟು ಆಹಾರ ಲಭ್ಯವಿದೆ. ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಸುಮಾರಿ 23 ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಜಾರ್ಖಂಡ್​ನಲ್ಲಿ 8 ಮಂದಿ ಸಾವು

ಜಾರ್ಖಂಡ್‌ನ ಹಜಾರಿಬಾಗ್ ಮತ್ತು ಪಲಾಮು ಜಿಲ್ಲೆಗಳಲ್ಲಿ ಶನಿವಾರ ಸಂಭವಿಸಿದ ಪ್ರತ್ಯೇಕ ಸಿಡಿಲು ಬಡಿತ ಘಟನೆಗಳಲ್ಲಿ ಇಬ್ಬರು ಹುಡುಗಿಯರು, ಮೂವರು ಮಹಿಳೆಯರು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ 7 ಮಂದಿ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಸಿಡಿಲು ಬಡಿದಿದೆ. 13 ವರ್ಷದ ಬಾಲಕನೊಬ್ಬ ಮನೆಗೆ ಮರಳುತ್ತಿದ್ದಾಗ ಸಿಡಿಲು ಬಡಿದಿದೆ ಅಧಿಕಾರಿಗಳು ತಿಳಿಸಿದ್ದಾರೆ. ಹಜಾರಿಬಾಗ್ ಜಿಲ್ಲೆಯಲ್ಲಿ ಆರು ಮತ್ತು ಪಲಾಮುವಿನಲ್ಲಿ ಎರಡು ಸಾವು ಸಂಭವಿಸಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details