ಮುಂಬೈ:ಒಡಿಶಾದ ಬಾಲಸೋರ್ ರೈಲು ದುರಂತದ ಸಂತ್ರಸ್ತರಿಗೆ ಕ್ಲೈಮ್ ಪಾವತಿ ಪ್ರಕ್ರಿಯೆಗೆ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಶನಿವಾರ ಹಲವು ನಿಯಮಗಳ ಸಡಿಲಿಕೆಗಳನ್ನು ಪ್ರಕಟಿಸಿದೆ. ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ, ಸಂತ್ರಸ್ತರ ಸಂಬಂಧಿಕರಿಗೆ ಕ್ಲೈಮ್ ಪಾವತಿ ಪ್ರಕ್ರಿಯೆಗೆ ಸಡಿಲಿಕೆಗಳನ್ನು ಘೋಷಿಸಿದರು. "ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಐಸಿ ಸಂತ್ರಸ್ತರಿಗೆ ಬೆಂಬಲ ನೀಡಲು ಬದ್ಧವಾಗಿದೆ ಮತ್ತು ಹಣಕಾಸಿನ ಪರಿಹಾರವನ್ನು ಒದಗಿಸಲು ಕ್ಲೈಮ್ ಪಾವತಿಯನ್ನು ತ್ವರಿತಗೊಳಿಸುತ್ತದೆ" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಎಲ್ಐಸಿ ಪಾಲಿಸಿಗಳ ಹಕ್ಕುದಾರರ ಕಷ್ಟಗಳನ್ನು ತಗ್ಗಿಸಲು ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ಸಹ ನಿಗಮವು ಅನೇಕ ರಿಯಾಯಿತಿಗಳನ್ನು ನೀಡಿದೆ. ನೋಂದಾಯಿತ ಮರಣ ಪ್ರಮಾಣಪತ್ರಗಳ ಬದಲಿಗೆ ರೈಲ್ವೆ, ಪೊಲೀಸ್ ಅಥವಾ ಯಾವುದೇ ರಾಜ್ಯ ಅಥವಾ ಕೇಂದ್ರ ಅಧಿಕಾರಿಗಳು ಪ್ರಕಟಿಸಿದ ಸಾವುನೋವುಗಳ ಪಟ್ಟಿಯನ್ನು ಸಾವಿನ ಪುರಾವೆಯಾಗಿ ಸ್ವೀಕರಿಸಲಾಗುವುದು ಎಂದು ಸಂಸ್ಥೆ ತಿಳಿಸದೆ.
ಸಹಾಯವಾಣಿ ಕೇಂದ್ರ ಆರಂಭ: ಕ್ಲೈಮ್-ಸಂಬಂಧಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮತ್ತು ಹಕ್ಕುದಾರರಿಗೆ ಸಹಾಯವನ್ನು ಒದಗಿಸಲು ಕಾರ್ಪೊರೇಷನ್ ವಿಭಾಗೀಯ ಮತ್ತು ಶಾಖೆಯ ಮಟ್ಟದಲ್ಲಿ ವಿಶೇಷ ಸಹಾಯ ಕೇಂದ್ರ ಮತ್ತು ಸಹಾಯವಾಣಿ ಕೇಂದ್ರವನ್ನು (022-68276827) ಸ್ಥಾಪಿಸಿದೆ. ಹಕ್ಕುದಾರರನ್ನು ತಲುಪಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ಕ್ಲೈಮ್‌ಗಳನ್ನು ತ್ವರಿತವಾಗಿ ನೀಡಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
₹10 ಲಕ್ಷದವರೆಗೆ ವಿಮಾ ಪರಿಹಾರ:ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಮ್ ಕಾರ್ಪೊರೇಷನ್ (ಐಆರ್‌ಸಿಟಿಸಿ) ತನ್ನ ಪ್ರಯಾಣಿಕರಿಗೆ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ವಿಮೆ ಆಯ್ಕೆ ಮಾಡಿಕೊಂಡವರಿಗೆ ರೂ. 10 ಲಕ್ಷದವರೆಗೆ ವಿಮಾ ರಕ್ಷಣೆ ಒದಗಿಸುತ್ತದೆ.
ಅಪಘಾತದ ಬಳಿಕ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮೃತರಿಗೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದರು. ಆದರೆ ಐಆರ್‌ಸಿಟಿಸಿಯಲ್ಲಿ ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರು ತೆಗೆದುಕೊಳ್ಳುವ ಪ್ರಯಾಣ ವಿಮೆಗೆ ಐಆರ್‌ಸಿಟಿಸಿ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.