ನವದೆಹಲಿ: ಗುಜರಾತ್ನ ಸರ್ಕಾರಿ ನೌಕರರು ತನ್ನ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಅವರಿಗೆ ಆಮಿಷ ಒಡ್ಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಆಮ್ ಆದ್ಮಿ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸುವಂತೆ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ನಿವೃತ್ತ ಸರ್ಕಾರಿ ಅಧಿಕಾರಿಗಳ ಗುಂಪೊಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಎಎಪಿಯಿಂದ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಸೆಕ್ಷನ್ 1 ಎ ಉಲ್ಲಂಘನೆಯಾಗಿರುವುದನ್ನು ಉಲ್ಲೇಖಿಸಿ ನಿವೃತ್ತ ಅಧಿಕಾರಿಗಳ ಗುಂಪು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಮದನ್ ಗೋಪಾಲ್ ಹೇಳಿದ್ದಾರೆ.
ರಾಜ್ಕೋಟ್ನಲ್ಲಿ ಕೇಜ್ರಿವಾಲ್ ಮಾತನಾಡಿದ್ದು ಸಂಪೂರ್ಣ ತಪ್ಪು. ಸಂವಿಧಾನದಲ್ಲಿ ನಂಬಿಕೆ ಇರುವ ನಮಗೆ ಇದರಿಂದ ನೋವಾಗಿದೆ. ಒಂದು ರಾಜ್ಯದ ಮುಖ್ಯಮಂತ್ರಿಗಳಿಂದ ಇಂಥ ವಿವಾದಾತ್ಮಕ ಮತ್ತು ಅಸಮತೋಲನದ ಹೇಳಿಕೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಮದನ ಗೋಪಾಲ್ ಹೇಳಿದರು.
ಚುನಾವಣಾ ಪೂರ್ವದಲ್ಲಿ ಪ್ರಚಾರ ಮಾಡುವುದು ಅವರ ಹಕ್ಕು. ಆದರೆ ಸಾರ್ವಜನಿಕ ಸಾರಿಗೆ ನಿಗಮಗಳ ಚಾಲಕರು, ಕಂಡಕ್ಟರ್‌ಗಳು ಮತ್ತು ಪೊಲೀಸ್ ಸಿಬ್ಬಂದಿಗೆ ನಿರ್ದಿಷ್ಟ ಪಕ್ಷಕ್ಕಾಗಿ ಕೆಲಸ ಮಾಡುವಂತೆ ಅವರು ಮಾಡಿದ ಮನವಿ ಸಂಪೂರ್ಣ ತಪ್ಪು. ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷಕ್ಕಾಗಿ ಪ್ರಚಾರ ಮಾಡುವಂತಿಲ್ಲ. ನಮಗೆ ನೀತಿ ಸಂಹಿತೆ ಇದೆ. ನಮ್ಮ ನಿಷ್ಠೆಯು ಭಾರತದ ಸಂವಿಧಾನದೊಂದಿಗೆ ಇದೆ. ಈ ಬೆಳವಣಿಗೆಯು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಒಳ್ಳೆಯದಲ್ಲ ಎಂದು ಮಾಜಿ ಅಧಿಕಾರಿ ಹೇಳಿದರು.