ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಪ್ರಚಾರ ಮಾಡಲು ಮೂವರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರಾದ ಗೌರವ್ ವಲ್ಲಭ, ದೀಪೇಂದರ್ ಎಸ್ ಹೂಡಾ ಮತ್ತು ಸೈಯದ್ ನಸೀರ್ ಹುಸೇನ್ ತಮ್ಮ ಅಧಿಕೃತ ವಕ್ತಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಗೌರವ್ ವಲ್ಲಭ, ನಾನು ದೀಪೇಂದರ್ ಹೂಡಾ ಮತ್ತು ಹುಸೇನ್ ಅವರೊಂದಿಗೆ ಕಾಂಗ್ರೆಸ್ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಖರ್ಗೆ ಪರ ಪ್ರಚಾರ ಮಾಡುವುದಾಗಿ ತಿಳಿಸಿದರು. ಈ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕೆಂದು ಬಯಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:26 ವರ್ಷಗಳ ಬಳಿಕ ದಕ್ಷಿಣ ಭಾರತದ ನಾಯಕನಿಗೆ ಸಿಗಲಿದೆ ಕಾಂಗ್ರೆಸ್ ಸಾರಥ್ಯ
ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾನು ಯಾರನ್ನೂ ವಿರೋಧಿಸಲು ಚುನಾವಣೆಗೆ ಇಳಿದಿಲ್ಲ. ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಹಿರಿಯ ಮತ್ತು ಯುವ ನಾಯಕರು ಅಖಾಡಕ್ಕೆ ಇಳಿಯುವಂತೆ ಒತ್ತಾಯಿಸಿದ್ದರಿಂದ ಚುನಾವಣೆಗೆ ಸ್ಪರ್ಧಿಸಿರುವೆ. ಇಂದಿನಿಂದಲೇ ಅಧಿಕೃತವಾಗಿ ಪ್ರಚಾರ ಆರಂಭಿಸುತ್ತೇನೆ. ಅಲ್ಲದೇ, ನಾನು ಪಕ್ಷದ 'ಒಬ್ಬ ವ್ಯಕ್ತಿ, ಒಂದು ಹುದ್ದೆ' ತತ್ವಕ್ಕೆ ಅನುಗುಣವಾಗಿ ನಾಮಪತ್ರ ಸಲ್ಲಿಸಿದ ದಿನವೇ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಖರ್ಗೆ ತಿಳಿಸಿದರು.