ಇಡುಕ್ಕಿ:ಪೊಲೀಸರು ಎಂದರೆ ಹರಕುಬಾಯಿ, ಕೋಪಿಷ್ಠರು, ಮುಂಗೋಪಿಗಳು. ಜನರಿಗೆ ಕೆಟ್ಟದಾಗಿ ಬೈಯ್ಯುತ್ತಾರೆ ಎಂಬುದು ಅವರ ಮೇಲಿರುವ ಆರೋಪ. ಆದರೆ ಕೇರಳದ ಈ ಪೊಲೀಸ್ ಸಿಬ್ಬಂದಿ ಮಾತ್ರ ಇದಕ್ಕೆ ಅಪವಾದ. ಕಡಿದಾದ ಗುಡ್ಡವನ್ನೇರಿ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯೊಬ್ಬಳನ್ನು ನಯವಾಗಿ ಮಾತನಾಡಿಸಿ ಆಕೆಯನ್ನು ಅಲ್ಲಿಂದ ಸುರಕ್ಷಿತವಾಗಿ ಕಾಪಾಡಿ ಕರೆ ತಂದಿದ್ದಾರೆ.
ಕೇರಳದ ಇಡುಕ್ಕಿಯ ಆದಿಮಾಲಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಕೆ.ಎಂ.ಸಂತೋಷ್ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯನ್ನು ರಕ್ಷಿಸಿದವರು. ಆದಿಮಾಲಿಯ ಕಡಿದಾದ ಪರ್ವತವನ್ನು ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ಬಗ್ಗೆ ಮಾಹಿತಿ ತಿಳಿದು ಅಪಾಯಕಾರಿ ಗುಡ್ಡವನ್ನು ಎಸ್ಐ ಸಂತೋಷ್ ಅವರ ಸಿಬ್ಬಂದಿ ಜೊತೆ ಹತ್ತಿ ಯುವತಿಯ ಬಳಿ ತೆರಳಿದ್ದಾರೆ.
ನಾನಿದ್ದೇನೆ ಎಂದು ಧೈರ್ಯ:ಆತ್ಮಹತ್ಯೆ ಮಾಡಿಕೊಳ್ಳಲು ಸಜ್ಜಾಗಿದ್ದ ಯುವತಿಯನ್ನು ಎಸ್ಐ ಸಂತೋಷ್ ದೂರದಿಂದಲೇ ಸಂತೈಸಿದ್ದಾರೆ. ಸಾವಿಗೆ ಕಾರಣ ಏನು, ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ. ಹೆದರಬೇಡ ನಾನಿದ್ದೇನೆ. ಸಾವೊಂದೇ ಸಮಸ್ಯೆಗೆ ಪರಿಹಾರ ಅಲ್ಲ ಎಂದು ಬಾಲಕಿಗೆ ಧೈರ್ಯ ತುಂಬಿದ್ದಾರೆ. ಏನೇ ಸಮಸ್ಯೆ ಇದ್ದರೂ ನಾನು ಅದನ್ನು ಬಗೆಹರಿಸಿಕೊಡುತ್ತೇನೆ. ಕೆಟ್ಟ ನಿರ್ಧಾರ ಮಾಡಬೇಡ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.